ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಇಂದು ಕ್ರೀಡಾ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ (ಇಂದು) ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ, ಚೆಸ್ ಆಟಗಾರ ಡಿ. ಗುಕೇಶ್, ಹಾಕಿ ಪ್ಲೇಯರ ಹರ್ಮನ್‌ಪ್ರೀತ್ ಸಿಂಗ್, ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಮತ್ತು ಡಬಲ್ ಒಲಿಂಪಿಕ್ ಪದಕ ವಿಜೇತ ಮನು ಬಾಕರ್ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು (NSA) ಕ್ರೀಡೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಪುರಸ್ಕರಿಸಲು ಪ್ರತಿ ವರ್ಷ ನೀಡಲಾಗುತ್ತದೆ. ಮತ್ತು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಹಿಂದಿನ ನಾಲ್ಕು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೀಡಲಾಗುತ್ತದೆ.
ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ಡಿ. ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕಳೆದ ವರ್ಷ ಪ್ಯಾರಿಸ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್ ಮನು ಭಾಕರ್ ಎರಡು ಕಂಚಿನ ಪದಕ ವಶಪಡಿಸಿಕೊಂಡಿದ್ದರು.
ಒಂದೇ ಆವೃತ್ತಿಯಲ್ಲಿ ಅವಳಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ದಾಖಲೆಯನ್ನು ಬರೆದಿದ್ದರು. ಮತ್ತೊಂದೆಡೆ ಇದೇ ಒಲಿಂಪಿಕ್ಸ್ನಲ್ಲಿ ಪುರುಷರ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದ ಹರ್ಮನ್‌ಪ್ರೀತ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿ ತಂಡವನ್ನು ಕಂಚಿನ ಪದಕಕ್ಕೆ ಮುನ್ನಡೆಸಿದ್ದರು.