ಲಖನೌ, ಉತ್ತರಪ್ರದೇಶ: ಇಂಡಿಯನ್ ಪ್ರೀಮಿಯರ್ ಲೀಗ್‌ನ 34 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 8 ವಿಕೆಟ್ಗಳಿಂದ ಸೋಲಿಸಿತು.
ಶುಕ್ರವಾರ ಏಕಾನಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಕ್ನೋ ಆರು ಎಸೆತಗಳು ಬಾಕಿ ಇರುವಂತೆಯೇ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇದು ಏಕಾನಾ ಕ್ರೀಡಾಂಗಣದ ಇತಿಹಾಸದಲ್ಲೇ ಅತಿ ದೊಡ್ಡ ರನ್ ಚೇಸ್ ಆಗಿದೆ. ಆರಂಭಿಕ ಜೋಡಿ ರಾಹುಲ್ (84) ಮತ್ತು ಡಿ ಕಾಕ್ 134ರನ್‌ಗಳ ಜೊತೆಯಾಟವಾಡಿ ನಿರ್ಗಮಿಸಿದ ನಂತರ, ನಿಕೋಲಸ್ ಪೂರನ್ (23) ಮತ್ತು ಮಾರ್ಕಸ್ ಸ್ಟೊಯಿನಿಸ್ (8) ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ಪುರನ್ ಫ್ರೀ ಹಿಟ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಚೆನ್ನೈ ಇನಿಂಗ್ಸ್ನ ಎರಡನೇ ಓವರ್ನಲ್ಲಿ ರಚಿನ್ ರವೀಂದ್ರ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೊಳಗಾಯಿತು. ನಂತರ ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಪವರ್ ಪ್ಲೇನಲ್ಲೇ ಯಶ್ ಠಾಕೂರ್ ಎಸೆತಕ್ಕೆ ಬಲಿಯಾದರು. ದೊಡ್ಡ ಸ್ಕೋರ್ ಕಲೆಹಾಕುವ ಗುರಿಯೊಂದಿಗೆ ಕಣಕ್ಕಿಳಿದ ಹಳದಿ ಪಡೆ 33 ರನ್ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡ ನಲುಗಿತು. ಮತ್ತೊಂದೆಡೆ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದಿದ್ದ ಅಜಿಂಕ್ಯ ರಹಾನೆ ಸ್ವಲ್ಪ ಹೊತ್ತು ಬ್ಯಾಟ್ ಬೀಸಿದರು. 24 ಎಸೆತಗಳನ್ನು ಎದುರಿಸಿ 36 ರನ್‌ಗಳನ್ನು ಚಚ್ಚಿ ಹೊರನಡೆದರು.
ಬಳಿಕ ಬಂದ ಶಿವಂ ದುಬೆ (3), ಇಂಪ್ಯಾಕ್ಟ್ ಪ್ಲೇಯರ್ ಸಮೀರ್ ರಿಜ್ವಿ (1) ಬಹುಬೇಗ ತಮ್ಮ ವಿಕೆಟ್ ಒಪ್ಪಿಸುವ ಮೂಲಕ ಕುಸಿಯುತ್ತಿರುವ ತಂಡದ ಕೈ ಹಿಡಿಯುವಲ್ಲಿ ವಿಫಲರಾದರು. ತಂಡದ ಸ್ಕೋರ್ 90ಕ್ಕೆ ತಲುಪುವ ವೇಳೆಗೆ 5 ವಿಕೆಟ್ ಉರಳಿದ್ದವು. ಈ ವೇಳೆ, ತಂಡದ ಜವಾಬ್ದಾರಿ ವಹಿಸಿಕೊಂಡ ಆಲ್ ರೌಂಡರ್ ರವೀಂದ್ರ ಜಡೇಜಾ (57*) ಮೊಯಿನ್ ಅಲಿ (30) ಅವರೊಂದಿಗೆ ಸೇರಿ 51 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಬ್ಯಾಕ್ ಟೂ ಬ್ಯಾಕ್ ಸಿಕ್ಸ್ರ ಸಿಡಿಸಿದ್ದ ಮೋಹಿನ್ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲಿದರು.