ನವದೆಹಲಿ: ಲಾಹೋರ್ನಲ್ಲಿರುವ ನವೀಕರಿಸಲಾದ ಗಡಾಫಿ ಕ್ರೀಡಾಂಗಣವನ್ನು ಶುಕ್ರವಾರ ಉದ್ಘಾಟಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಘೋಷಿಸಿದೆ. ಫೆಬ್ರವರಿ 8 ರಿಂದ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡ ತ್ರಿಕೋನ ಏಕದಿನ ಸರಣಿ ಆರಂಭವಾಗಲಿದ್ದು, ಅದಕ್ಕೂ ಒಂದು ದಿನ ಮುಂಚೆ ಗಡಾಫಿ ಕ್ರೀಡಾಂಗಣ ಉದ್ಘಾಟನೆಯಾಗಲಿದೆ.
117 ದಿನಗಳ ದಾಖಲೆಯ ಸಮಯದಲ್ಲಿ ಕ್ರೀಡಾಂಗಣದ ನವೀಕರಣ ಕಾರ್ಯಗಳು ಪೂರ್ಣಗೊಂಡಿವೆ ಮತ್ತು ಈಗ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಪ್ರಮುಖ ಐಸಿಸಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಕ್ರೀಡಾಂಗಣ ಸಿದ್ಧವಾಗಿದೆ ಎಂದು ಪಿಸಿಬಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ಹೊಸ ರೂಪವನ್ನು ಪಡೆದುಕೊಂಡಿರುವ ಕ್ರೀಡಾಂಗಣದಲ್ಲಿ ಪ್ರಕಾಶಮಾನವಾದ ಎಲ್ಇಡಿ ದೀಪಗಳು, ಎರಡು ಹೊಸ ದೊಡ್ಡ ಸ್ಕೋರ್ ಪರದೆಗಳು ಮತ್ತು ಎಲ್ಲಾ ಕಡೆಗೂ ಆರಾಮದಾಯಕ ಆಮದು ಮಾಡಿಕೊಳ್ಳಲಾದ ಆಸನಗಳನ್ನು ಅಳವಡಿಸಲಾಗಿದೆ. ಇದು ಪ್ರೇಕ್ಷಕರಿಗೆ ಅತ್ಯುತ್ತಮ ವೀಕ್ಷಣೆಯ ಅನುಭವ ನೀಡಲಿದೆ.
ಈ ಬಗ್ಗೆ ಮಾತನಾಡಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, "ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿದ ಕಾರ್ಮಿಕರಿಗೆ ನಾನು ಧನ್ಯವಾದ ಹೇಳುತ್ತೇನೆ. ಫ್ರಂಟಿಯರ್ ವರ್ಕ್ಸ್ ಆರ್ಗನೈಸೇಶನ್ (ಎಫ್ ಡಬ್ಲ್ಯುಒ), ಎನ್ ಇಎಸ್ ಪಿಎಕೆ, ಗುತ್ತಿಗೆದಾರರು ಮತ್ತು ಪಿಸಿಬಿ ತಂಡಗಳ ಸಂಯೋಜಿತ ಪ್ರಯತ್ನಗಳು ಈ ಕನಸನ್ನು ನನಸಾಗಿಸಿದೆ." ಎಂದು ಹೇಳಿದರು.
"ನಮ್ಮ ಕ್ರೀಡಾಂಗಣಗಳು ಈಗ ಅಂತರರಾಷ್ಟ್ರೀಯ ಮಾನದಂಡಗಳಿಗೆ ಸಮಾನವಾಗಿವೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಸಾಧ್ಯವಾದಷ್ಟು ಉತ್ತಮ ಅನುಭವವನ್ನು ನೀಡಲು ನಾವು ಹೆಮ್ಮೆಪಡುತ್ತೇವೆ. ಇಷ್ಟು ಕಡಿಮೆ ಸಮಯದಲ್ಲಿ ಈ ಕ್ರೀಡಾಂಗಣದ ರೂಪಾಂತರವು ನಮ್ಮ ಇಡೀ ತಂಡದ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ" ಎಂದು ಅವರು ತಿಳಿಸಿದರು.