ಸೂರತ್:ಇಲ್ಲಿನ ಲಾಲಾಭಾಯಿ ಕಾಂಟ್ರಾಕ್ಟರ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ ಒಂದು ವಿಕೆಟ್ ಅಂತರದ ರೋಚಕ ಜಯ ದಾಖಲಿಸಿದೆ. ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಅಜೇಯ ಅರ್ಧಶತಕದ (67* ರನ್) ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
226 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ 2 ರನ್ ಗಳಿಸುವಷ್ಟರಲ್ಲೇ ಆರಂಭಿಕ ಆಟಗಾರ ದೆಗಾ ನಿಶ್ಚಲ್ (1) ವಿಕೆಟ್ ಕಳೆದುಕೊಂಡಿತು. ಬಳಿಕ ಆರ್ ಸಮರ್ಥ್ (35) ಹಾಗೂ ಅನೀಶ್ ಕೆವಿ (34) ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು. ಇವರಿಬ್ಬರೂ ಎರಡನೇ ವಿಕೆಟ್ಗೆ 68 ರನ್ ಜೊತೆಯಾಟವಾಡಿದರು. ಈ ಹಂತದಲ್ಲಿ ಇಬ್ಬರೂ ಬ್ಯಾಟರ್ಗಳು ತಂಡದ ಸ್ಕೋರ್ 70 ರನ್ ಆಗಿದ್ದಾಗ ಒಬ್ಬರ ಹಿಂದೊಬ್ಬರು ಪೆವಿಲಿಯನ್ ಸೇರಿದರು.
ಕೆಲ ಹೊತ್ತಲ್ಲೇ ನಾಯಕ ನಿಕಿನ್ ಜೋಶ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 75 ರನ್ಗೆ ತಂಡವು 5 ವಿಕೆಟ್ ಕಳೆದುಕೊಂಡಿತ್ತು. ಆಗ ಕ್ರೀಸ್ನಲ್ಲಿದ್ದ ಮನೀಶ್ ಪಾಂಡೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ನಡುವೆ ಹಾರ್ದಿಕ್ ರಾಜ್ (14) ಹಾಗೂ ಕಿಶನ್ ಬೆಡಾರೆ (0) ಔಟಾದ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತಷ್ಟು ಸಂಕಷ್ಟಕ್ಕೆ (99ಕ್ಕೆ 6 ವಿಕೆಟ್) ಸಿಲುಕಿತ್ತು.
ಈ ಹಂತದಲ್ಲಿ ಮನೀಶ್ ಹಾಗೂ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ (23) ನಡುವೆ 34 ರನ್ ಜೊತೆಯಾಟ ಮೂಡಿಬಂತು. ತಂಡದ ಮೊತ್ತ 133 ರನ್ ಆಗಿದ್ದಾಗ ಶರತ್ ಔಟಾದರು. ತದನಂತರ ವಿಜಯ್ಕುಮಾರ್ ವೈಶಾಕ್ ಜೊತೆಗೆ ಅಮೂಲ್ಯ 64 ರನ್ ಸೇರಿಸಿದ ಪಾಂಡೆ, ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಬಳಿಕ ವೈಶಾಕ್ (38) ಹಾಗೂ ವಿಧ್ವತ್ ಕಾವೇರಪ್ಪ (8) ವಿಕೆಟ್ ಒಪ್ಪಿಸಿದರೂ ಕೂಡ ಇನ್ನೊಂದೆಡೆ ಗಟ್ಟಿಯಾಗಿ ನಿಂತ ಪಾಂಡೆ ತಂಡಕ್ಕೆ ಜಯ ತಂದಿತ್ತರು. ಕೊನೆಯ ವಿಕೆಟ್ಗೆ ವಾಸುಕಿ ಕೌಶಿಕ್ (1) ಜೊತೆ 15 ರನ್ ಅಜೇಯ ಜೊತೆಯಾಟವಾಡಿ ಗೆಲುವನ್ನು ಸಂಭ್ರಮಿಸಿದರು. 82.4 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಬಾರಿಸಿದ ಕರ್ನಾಟಕ ಸಿ ಗುಂಪಿನ 5 ಪಂದ್ಯಗಳಲ್ಲಿ 3ನೇ ಗೆಲುವಿನಿಂದ 21 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಇದಕ್ಕೂ ಮುನ್ನ ಮೊದಲ ದಿನ (ಫೆ.2) ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ರೈಲ್ವೇಸ್ ಮೊದಲ ಇನ್ನಿಂಗ್ಸ್ನಲ್ಲಿ 155 ರನ್ಗೆ ಆಲೌಟ್ ಆಗಿತ್ತು. ನಾಯಕ ಪ್ರಥಮ್ ಸಿಂಗ್ ಸರ್ವಾಧಿಕ 56 ರನ್ ಬಾರಿಸಿದ್ದರು. ಬಳಿಕ ಬ್ಯಾಟಿಂಗ್ ಮಾಡಿದ ಕರ್ನಾಟಕ ಪ್ರಥಮ್ ಇನ್ನಿಂಗ್ಸ್ನಲ್ಲಿ 174 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 19 ರನ್ ಅಲ್ಪ ಮುನ್ನಡೆ ಸಾಧಿಸಿತ್ತು. ತದನಂತರ ಎರಡನೇ ಇನ್ನಿಂಗ್ಸ್ ಆಡಿದ ರೈಲ್ವೇಸ್ 244 ರನ್ಗಳಿಗೆ ಸರ್ವಪತನ ಕಂಡಿತ್ತು. ತಂಡದ ಪರ ಎಂ ಸೈಫ್ 82 ಹಾಗೂ ಕೀಪರ್ ಸೂರಜ್ ಅಹುಜಾ 48 ರನ್ ಕಾಣಿಕೆ ನೀಡಿದ್ದರು. ಇದರೊಂದಿಗೆ 225 ರನ್ ಲೀಡ್ ಪಡೆದ ರೈಲ್ವೇಸ್ ತಂಡ ಕರ್ನಾಟಕಕ್ಕೆ 226 ರನ್ ಜಯದ ಗುರಿ ನೀಡಿತ್ತು.
ಇದನ್ನೂ ಓದಿ:ಮೂರನೇ ದಿನದಾಟ: ಇಂಗ್ಲೆಂಡ್ಗೆ 399 ರನ್ ಗುರಿ, ಭಾರತದ ಬೌಲಿಂಗ್ ಮೇಲೆ 'ಜಯದ ಹೊಣೆ'