ಹೈದರಾಬಾದ್: ಬೆಂಗಳೂರಿನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದ್ದ ನ್ಯೂಜಿಲೆಂಡ್ ತಂಡ ಇದೀಗ ಎರಡನೇ ಟೆಸ್ಟ್‌ಗೆ ಸಜ್ಜಾಗಿದೆ. ಅಕ್ಟೋಬರ್ 24ರಿಂದ ಪುಣೆಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲೂ ಇದೇ ವೇಗವನ್ನು ಮುಂದುವರಿಸಿ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳಲು ಕಿವೀಸ್ ಯೋಜನೆ ರೂಪಿಸಿದೆ.
ಆದರೆ ಎರಡನೇ ಟೆಸ್ಟ್‌ಗೂ ಮುನ್ನವೇ ನ್ಯೂಜಿಲೆಂಡ್‌ಗೆ ತೀವ್ರ ಪೆಟ್ಟು ಬಿದ್ದಿದೆ. ಸ್ಟಾರ್ ಬ್ಯಾಟರ್ ಮತ್ತು ಸೀಮಿತ ಓವರ್‌ಗಳ ನಾಯಕ ಕೇನ್ ವಿಲಿಯಮ್ಸ್ ಪುಣೆ ಟೆಸ್ಟ್‌ನಿಂದಲೂ ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದಿಂದ ವಿಲಿಯಮ್ಸನ್ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಎರಡನೇ ಟೆಸ್ಟ್‌ನಿಂದಲೂ ಅವರನ್ನು ಕೈಬಿಡಲಾಗಿದೆ.
ತೊಡೆ ಸಂದು ಗಾಯಕ್ಕೆ ತುತ್ತಾಗಿದ್ದ ವಿಲಿಯಮ್ಸನ್: ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ವಿಲಿಯಮ್ಸನ್ ತೊಡೆ ಸಂದು ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಕೇನ್ ಆಟದಿಂದ ದೂರವಾಗಿದ್ದರು. ಪ್ರಸ್ತುತ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ, ಕಿವೀಸ್ ಸ್ಟಾರ್ ಬ್ಯಾಟ್ಸ್‌ಮನ್ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಿವೀಸ್ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ದೃಢಪಡಿಸಿದ್ದಾರೆ.
"ಕೇನ್ ವಿಲಿಯಮ್ಸನ್ ಪ್ರಸ್ತುತ ನಮ್ಮ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಕೇನ್ ಮೂರನೇ ಟೆಸ್ಟ್‌ಗೆ ಲಭ್ಯರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಸ್ಟೇಡ್ ತಿಳಿಸಿದ್ದಾರೆ. ಪುಣೆಯಲ್ಲಿ, ಮೊದಲ ಟೆಸ್ಟ್‌ನಲ್ಲಿ ಆಡಿದ ತಂಡದೊಂದಿಗೆ ಕಿವೀಸ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಮಾರ್ಕ್ ಚಾಪ್‌ಮನ್ ಮುಂದುವರಿಕೆ:ಮೊದಲ ಟೆಸ್ಟ್‌ಗೆ ಕೇನ್ ವಿಲಿಯಮ್ಸನ್ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಮಾರ್ಕ್ ಚಾಪ್‌ಮನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಅವರು ಎರಡನೇ ಟೆಸ್ಟ್‌ನಲ್ಲೂ ತಂಡದಲ್ಲಿ ಮುಂದುವರಿಯಲಿದ್ದಾರೆ. ಕೇನ್ ಅನುಪಸ್ಥಿತಿಯಲ್ಲಿ ಕಾನ್ವೇ, ರಚಿನ್, ಡೇರಿಲ್, ಬುಂಡೆಲ್ ಮತ್ತು ಲ್ಯಾಥಮ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಏಷ್ಯಾದಲ್ಲಿ ವಿಲಿಯಮ್ಸ್ ದಾಖಲೆ:ಏಷ್ಯಾದಲ್ಲಿ ವಿಲಿಯಮ್ಸನ್ ಉತ್ತಮ ದಾಖಲೆ ಹೊಂದಿದ್ದಾರೆ. ಅವರು ಏಷ್ಯಾದಲ್ಲಿ ಇದುವರೆಗೂ 24 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಈ ಪೈಕಿ 48.85 ಸರಾಸರಿಯಲ್ಲಿ ಸ್ಕೋರ್ ಮಾಡಿದ್ದಾರೆ. ಆದರೆ, ಭಾರತ ನೆಲದಲ್ಲಿ ವಿಲಿಯಮ್ಸ್ ಅವರ ದಾಖಲೆ ಉತ್ತಮವಾಗಿಲ್ಲ. ಭಾರತದಲ್ಲಿ ಅವರು ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ 33.53 ಸರಾಸರಿಯಲ್ಲಿ ಸ್ಕೋರ್ ಮಾಡಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ, ಧೋನಿ ಅಲ್ಲವೇ ಅಲ್ಲ: ಈ ಕ್ರಿಕೆಟರ್ ಬಳಿ ಇದೆ ಅತ್ಯಂತ ದುಬಾರಿ ಕಾರು!