ನವದೆಹಲಿ:ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸೀಸನ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. ನಿನ್ನೆ ದೆಹಲಿಯಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ದಾಖಲಿಸಿ ಗಮನ ಸೆಳೆದರು.
ಈ ಹಿಂದೆ, ಲಿಸ್ಟ್-ಎ ಕ್ರಿಕೆಟ್ನಲ್ಲಿ 29 ಎಸೆತಗಳಲ್ಲಿ ವೇಗದ ಶತಕ ಗಳಿಸಿದ್ದ ಉದಯೋನ್ಮುಖ ಆಸ್ಟ್ರೇಲಿಯಾದ ಆಟಗಾರ ಮೆಕ್‌ಗುರ್ಕ್, ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸ್ಫೋಟಕ ಇನಿಂಗ್ಸ್ ಆಡಿದರು. ಕೇವಲ 18 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಏಳು ಸಿಕ್ಸರ್‌ಗಳೊಂದಿಗೆ 65 ರನ್ ಚಚ್ಚಿದರು. 361.11 ರನ್ ಸ್ಟ್ರೈಕ್ ರೇಟ್‌ನಲ್ಲಿ ಅವರು ಬ್ಯಾಟ್ ಬೀಸಿದ್ದಾರೆ.
ಹೈದರಾಬಾದ್ ನೀಡಿದ್ದ 267 ರನ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲಿ ಆರಂಭಿಕ ಆಟಗಾರರನ್ನು ಕಳೆದುಕೊಂಡಿತು. ನಂತರ ಕ್ರೀಸಿಗೆ ಬಂದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರು ವಾಷಿಂಗ್ಟನ್ ಸುಂದರ್ ಎಸೆದ ಒಂದೇ ಓವರ್‌ನಲ್ಲಿ 30 ರನ್ ಪೇರಿಸಿದರು. ಮೂರನೇ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರ ಬೆವರಿಳಿಸಿದರು.