ಬೆಂಗಳೂರು: ಭಾರತದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಆಗಿ ಜಸಿಂತಾ ಕಲ್ಯಾಣ್ ಇತಿಹಾಸ ನಿರ್ಮಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮಂಗಳವಾರ ಹೇಳಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, 'ಜಸಿಂತಾ ಕಲ್ಯಾಣ್ ದೇಶದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ' ಎಂದು ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ನ(WPL) ಪಂದ್ಯಗಳಿಗೆ ಪಿಚ್ ತಯಾರಿಯ ನೇತೃತ್ವ ವಹಿಸಿರುವ ಜಸಿಂತಾ ಅವರ ದೃಢ ನಿರ್ಧಾರವು ಯಾವುದೇ ಅಡೆತಡೆಗಳನ್ನು ಮುರಿದು ಮುನ್ನುಗ್ಗುವ ಇಚ್ಛೆಯನ್ನು ಸಾಕಾರಗೊಳಿಸಿದೆ. ಈ ಅದ್ಭುತ ಸಾಧನೆಯು ಕ್ರೀಡೆಯ ಮೇಲಿನ ಅವರ ಬದ್ಧತೆ ಮತ್ತು ಉತ್ಸಾಹಕ್ಕೆ ನಿದರ್ಶನ. ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಪಿಚ್‌ನ ಮೇಲ್ವಿಚಾರಣೆಯಲ್ಲಿ ಅವರ ಪಾತ್ರ ಮಹತ್ವದ್ದು. ಇದು ಭಾರತದಲ್ಲಿ ಕ್ರಿಕೆಟ್ ವಿಕಸನಗೊಳ್ಳುತ್ತಿರುವುದನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.