ಚೆನ್ನೈ/ಅಹಮದಾಬಾದ್:ಐಪಿಎಲ್ನಲ್ಲಿ ಇಂದು ಸೂಪರ್ ಸಂಡೆ ಧಮಾಕಾ. ಎರಡು ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಾದರೆ, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಸೆಣಸಾಡಲಿವೆ.
ಸೋಲು-ಗೆಲುವಿನ ಸುಳಿಯಲ್ಲಿ ಗುಜರಾತ್:ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಸೋಲು ಗೆಲುವಿನ ಸುಳಿಯಲ್ಲಿದೆ. ಒಂದು ಪಂದ್ಯ ಗೆದ್ದರೆ, ಇನ್ನೊಂದು ಸೋತಿದೆ. ಆಡಿರುವ 9 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದೆ. 5 ಪಂದ್ಯಗಳನ್ನು ಕೈಚೆಲ್ಲಿದೆ. ತಂಡದಲ್ಲಿ ಶುಭ್ಮನ್ ಗಿಲ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಓಮರ್ಝಾಯಿ, ರಶೀದ್ ಖಾನ್, ಮೋಹಿತ್ ಶರ್ಮಾರಂತಹ ಆಟಗಾರರಿದ್ದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ.
ಅದರಲ್ಲೂ ಕಳೆದ ವರ್ಷ ರನ್ ಶಿಖರವನ್ನೇ ಕಟ್ಟಿದ್ದ ಶುಭ್ಮನ್ಗಿಲ್ ಈ ಋತುವಿನಲ್ಲಿ 2 ಅರ್ಧಶತಕ ಮಾತ್ರ ಬಾರಿಸಿದ್ದಾರೆ. ಮೂರು ಬಾರಿ ಒಂದಂಕಿಗೆ ಔಟ್ ಆಗಿದ್ದಾರೆ. ನಾಯಕನ ವೈಫಲ್ಯದ ಜೊತೆಗೆ ಉಳಿದ ಆಟಗಾರರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆಫ್ಘಾನಿಸ್ತಾನ ಸೆನ್ಸೇಷನ್ ರಶೀದ್ ಖಾನ್ ಸ್ಪಿನ್ ಜಾದೂ ಕೂಡ ಕೆಲಸ ಮಾಡುತ್ತಿಲ್ಲ. ಮಿಲ್ಲರ್ ಕಿಲ್ಲರ್ ಆಗಿ ಪರಿಣಾಮ ಬೀರಿಲ್ಲ. ಮಾಜಿ ಚಾಂಪಿಯನ್ ತಂಡ ಪ್ಲೇಆಫ್ಗೇರಲು ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲ್ಲಬೇಕಿದೆ.
ಇನ್ನೂ, ಕಳೆದ ಪಂದ್ಯದಲ್ಲಿ ದೈತ್ಯ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಂಡಿರುವ ಆರ್ಸಿಬಿ ಗುಜರಾತ್ ವಿರುದ್ಧ ಅಹಮದಾಬಾದ್ನಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಇದು ಇತ್ತಂಡಗಳ ಮೊದಲ ಪೈಪೋಟಿಯಾಗಿದೆ. ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ವಿಲ್ ಜಾಕ್ಸ್ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.