ಜೆಡ್ಡಾ(ಸೌದಿ ಅರೇಬಿಯಾ): ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(IPL)ಗೆ ಸೌದಿ ಅರೇಬಿಯಾದ ಜೆಡ್ಡಾ ನಗರಿಯಲ್ಲಿ ಇಂದು ಮತ್ತು ನಾಳೆ ಆಟಗಾರರ ಮೆಗಾ ಹರಾಜು ನಡೆಯಲಿದೆ. ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾದ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಸೇರಿದಂತೆ ಹಲವು ಆಟಗಾರರ ಮೇಲೆ ವಿವಿಧ ಫ್ರಾಂಚೈಸಿಗಳು ಖರೀದಿಗೆ ಯೋಜನೆ ರೂಪಿಸಿವೆ. ಹರಾಜಿನಲ್ಲಿರುವ ದೇಶ-ವಿದೇಶಗಳ ಒಟ್ಟು 577 ಆಟಗಾರರಲ್ಲಿ ರಿಷಬ್ ಪಂತ್ ಅತೀ ಹೆಚ್ಚು ಬೆಲೆಗೆ ಮಾರಾಟವಾಗುವ ಸಾಧ್ಯತೆ ದಟ್ಟವಾಗಿದೆ.
IPLನಲ್ಲಿ ಪಾಲ್ಗೊಳ್ಳುವ 10 ತಂಡಗಳ ಬಳಿ ಆಟಗಾರರನ್ನು ಖರೀದಿಸಲು 641.5 ಕೋಟಿ ರೂಪಾಯಿ ಹಣವಿದೆ. ಪಂಜಾಬ್ ಕಿಂಗ್ಸ್ ಖಾತೆಯಲ್ಲಿ ಅತೀ ಹೆಚ್ಚು 110.50 ಕೋಟಿ ಹಣವಿದ್ದು, ಹರಾಜಿನಲ್ಲಿ ಉಳಿದ ಫ್ರಾಂಚೈಸಿಗಳನ್ನು ಹಿಂದಿಕ್ಕುವ ನಿರೀಕ್ಷೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪರ್ಸ್‌ನಲ್ಲಿ 83 ಕೋಟಿ ರೂ, ಡೆಲ್ಲಿ ಕ್ಯಾಪಿಟಲ್ಸ್- 73 ಕೋಟಿ ಮತ್ತು ರೈಟ್ ಟು ಮ್ಯಾಚ್ ಕಾರ್ಡ್‌ಗಳನ್ನು ಹೊಂದಿವೆ.
ಏನಿದು ರೈಟ್ ಟು ಮ್ಯಾಚ್ ಕಾರ್ಡ್?: ತಂಡದಿಂದ ಕೈಬಿಟ್ಟಿರುವ ಆಟಗಾರನನ್ನು ಹರಾಜಿನಲ್ಲಿ ಮತ್ತೆ ಪಡೆಯಲು ಫ್ರಾಂಚೈಸಿಗಳಿಗೆ ಇರುವ ಅವಕಾಶವೇ ರೈಟ್ ಟು ಮ್ಯಾಚ್ ಕಾರ್ಡ್. ಆದರೆ ಈ ಬಾರಿ ಈ ನಿಯಮದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಹೊಸ ಬದಲಾವಣೆಯಂತೆ, ಆರ್‌ಟಿಎಂ ಕಾರ್ಡ್ ಬಳಸಿ ಆಟಗಾರರನ್ನು ಮತ್ತೆ ಪಡೆಯಲು ಫ್ರಾಂಚೈಸಿ ಬಯಸಿದರೆ, ಮತ್ತೊಂದು ತಂಡ ಆಟಗಾರರನ ಬಿಡ್ ಮೊತ್ತ ಹೆಚ್ಚಿಸಬಹುದು. ಆಗ ತಾನು ಮೊದಲು ಕೈಬಿಟ್ಟಿರುವ ತಂಡ ಅಂತಿಮ ಬಿಡ್ ಮೊತ್ತದಲ್ಲಿ ಆಟಗಾರರನನ್ನು ಪಡೆಯಬೇಕಿದೆ.
ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪ್ರಾಂಚೈಸಿ ತನ್ನ ಆರ್‌ಟಿಎಮ್ ಕಾರ್ಡ್ ಬಳಸಿ ಪಂತ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಏಕೆಂದರೆ, ಪಂತ್ ಕೂಡಾ ಇದನ್ನು ಬಯಸುತ್ತಿಲ್ಲ ಎಂಬುದು ಗುಟ್ಟಾಗಿಲ್ಲ. "ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳುವಿಕೆ ಕೇವಲ ಹಣದ ವಿಚಾರವಂತೂ ಖಂಡಿತಾ ಅಲ್ಲ" ಎಂಬ ಅವರ ಒಕ್ಕಣೆಯಿಂದಲೇ ಇದು ಅರ್ಥವಾಗುತ್ತದೆ.
ರಿಷಬ್ ಪಂತ್‌ಗೆ 25 ಕೋಟಿ?: ಇದರ ಮಧ್ಯೆ, ಪಂತ್ ಹರಾಜಿನಲ್ಲಿ 25 ಕೋಟಿ ರೂಗೆ ಬಿಕರಿಯಾಗುವ ಭಾರತದ ಮೊದಲ ಆಟಗಾರನಾಗ್ತಾರಾ ಎಂಬುದು ದೊಡ್ಡ ಪ್ರಶ್ನೆ. ಆದರೆ, ಹತ್ತು ತಂಡಗಳು ಹೇಗೆ ಹರಾಜಿಗೆ ಸಿದ್ಧತೆ ನಡೆಸಿವೆ ಮತ್ತು ತಮ್ಮ ತಂಡಗಳನ್ನು ಹೇಗೆ ಸಂಯೋಜಿಸಲು ತೀರ್ಮಾನಿಸಿವೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್(ಎಂಐ) ಸ್ಟಾರ್ ಆಟಗಾರರನ್ನು ಖರೀದಿಸುವ ಸಾಧ್ಯತೆ ಕಡಿಮೆ.
ಆದರೆ, ಪಂಜಾಬ್ ಕಿಂಗ್ಸ್ ಪ್ರತಿ ಎರಡು ವರ್ಷಕ್ಕೊಮ್ಮೆ ತಮ್ಮ ತಂಡವನ್ನು ಬದಲಿಸುತ್ತಿದ್ದು, ತಮ್ಮ ಹಣದ ಚೀಲವನ್ನು ಹೆಡ್ ಕೋಚ್ ರಿಕಿ ಪಾಂಟಿಂಗ್ ಅವರ ಸಲಹೆಯಂತೆ ಖರ್ಚು ಮಾಡಲು ತೀರ್ಮಾನಿಸಿದಂತಿದೆ. ಪಾಂಟಿಂಗ್ ತಮ್ಮ ನೆಚ್ಚಿನ ಆಟಗಾರರನ್ನು ಪಡೆಯಲು ಉತ್ಸುಕರಾಗಿದ್ದಾರೆ. ಸಮರ್ಥ ನಾಯಕತ್ವ ಮತ್ತು ವಿಭಿನ್ನ ಬ್ಯಾಟಿಂಗ್ ಶೈಲಿಯಿಂದ ರನ್ ಕದಿಯುವ ಪಂತ್ ವಿಶೇಷ ಪ್ರತಿಭೆ ಪಾಂಟಿಂಗ್ ಅವರ ಮೆಚ್ಚುಗೆ ಗಳಿಸಿದೆ.