ಕಾರವಾರ: ಅನಿಶ್ಚಿತೆಯಲ್ಲಿದ್ದ ಕಾರವಾರ ವಾಣಿಜ್ಯ ಬಂದರು ಅಭಿವೃದ್ಧಿಯ ಎರಡನೇ ಹಂತದ ವಿಸ್ತರಣೆಗೆ ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಕೊನೆಗೂ ಹಸಿರು ನಿಶಾನೆ ತೋರಿಸಿದೆ.
ಸಾಕಷ್ಟು ಚರ್ಚಿತವಾಗಿ ಮೀನುಗಾರರ ಹೋರಾಟಕ್ಕೂ ಕಾರಣವಾಗಿದ್ದ ಯೋಜನೆಗೆ 2020ರಲ್ಲಿ ಹೈಕೋರ್ಟ್ ಹಾಗೂ 2022ರಲ್ಲಿ ರಾಷ್ಟ್ರೀಯ ಹಸಿರು ಪೀಠ ತಡೆಯಾಜ್ಞೆ ನೀಡಿತ್ತು. ಇದೀಗ ಸುಮಾರು 5 ವರ್ಷದ ಬಳಿಕ ಕೊನೆಗೂ ವಿಸ್ತರಣೆಗೆ ಅಂಕಿತ ಸಿಕ್ಕಿದ್ದು, ತಿಂಗಳಲ್ಲಿ ಕಾಮಗಾರಿ ಆರಂಭಕ್ಕೆ ಬಂದರು ಇಲಾಖೆ ಕ್ರಮ ಕೈಗೊಳ್ಳಲಿದೆ.
ಸಾಗರಮಾಲಾ ಯೋಜನೆಯಲ್ಲಿ 274 ಕೋಟಿ ವೆಚ್ಚದಲ್ಲಿ ಬೈತಖೋಲ್ ವಾಣಿಜ್ಯ ಬಂದರಿನ 250 ಮೀಟರ್ ಜಟ್ಟಿ ಹಾಗೂ 880 ಮೀಟರ್ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು 2019ರಲ್ಲಿ ಪ್ರಾರಂಭಿಸಲಾಗಿತ್ತು. ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ. 250 ಮೀಟರ್ ಜಟ್ಟಿಯನ್ನು 145 ಮೀಟರ್ ವಿಸ್ತರಿಸುವ ಕಾರ್ಯವನ್ನೂ ಸಹ ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ವಾಣಿಜ್ಯ ಬಂದರಿನ ಅಭಿವೃದ್ಧಿಯ ಎರಡನೇ ಹಂತದ ಕಾಮಗಾರಿ ಐದು ಹಂತದಲ್ಲಿ ನಿರ್ಮಾಣವಾಗಲಿದೆ ಎಂದು ಬಂದರು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
ಆದರೆ, ಅದನ್ನು ವಿರೋಧಿಸಿ ಬೈತಖೋಲ್ ಮೀನುಗಾರರ ಸಂಘಟನೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. 2020ರಲ್ಲಿ ಹೈಕೋರ್ಟ್ ಕಾಮಗಾರಿಗೆ ತಡೆ ನೀಡಿತ್ತು. ಈ ಯೋಜನೆಯಿಂದಾಗಿ ಪರಿಸರಕ್ಕೆ ಹಾನಿಯಾಗಿ ಉದ್ಯೋಗ ಕೂಡ ಕಡಿತವಾಗುತ್ತದೆ ಎನ್ನುವ ಆತಂಕದೊಂದಿಗೆ, ತಮ್ಮ ಸ್ಥಳ ಕಾಯ್ದುಕೊಳ್ಳುವ ಜತೆಗೆ ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬೀಳುತ್ತದೆ ಎನ್ನುವ ಕಾರಣಕ್ಕೆ ಮೀನುಗಾರರು ಯೋಜನೆಯನ್ನು ವಿರೋಧಿಸಿದ್ದರು. ಸುಮಾರು ನಾಲ್ಕೈದು ತಿಂಗಳಿನಿಂದ ತೀವ್ರ ಸ್ವರೂಪದ ಹೋರಾಟವೇ ನಡೆದಿತ್ತು.
2021ರಲ್ಲಿ ಇಲ್ಲಿನ ವಾಣಿಜ್ಯ ಬಂದರು ವಿಸ್ತರಣೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿ, ಮಹತ್ವದ ಆದೇಶ ಪ್ರಕಟಿಸಿತ್ತು. ಬಳಿಕ ಮತ್ತೆ ಮೀನುಗಾರರು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಕಾರವಾರವನ್ನು 2011 ಮತ್ತು 2019ರ ಅಧಿಸೂಚನೆಗಳ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲಾಗಿದೆ. ಆದರೆ, ಹೈಕೋರ್ಟ್ ಆದೇಶವು ಈ ಪ್ರಕರಣದಲ್ಲಿ ಮೀನುಗಾರರ ಆಸ್ತಿಯ ಹಕ್ಕು ಹಾಗೂ ಜೀವನೋಪಾಯದ ಹಕ್ಕನ್ನು ನಿರ್ಲಕ್ಷಿಸಿದ್ದು, ಯೋಜನೆಯಿಂದ ಮೀನುಗಾರರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ದೂರಲಾಗಿತ್ತು.
ಈ ಆಧಾರದ ಮೇಲೆ 2022ರಲ್ಲಿ ಸುಪ್ರೀಂ ಕೋರ್ಟ್ ಮತ್ತೆ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಇದಲ್ಲದೆ ಬಂದರು ವಿಸ್ತರಣೆಗೆ ತಡೆ ನೀಡುವಂತೆ ಕೋರಿ “ಕಾರವಾರ ಉಳಿಸಿ” ಎಂಬ ಸಂಘಟನೆ ಚೆನ್ನೈ ಹಸಿರು ಪೀಠದ ಮೊರೆ ಹೋಗಿತ್ತು. ಈ ವೇಳೆಯೂ ಸಹ ಎನ್‌ಜಿಟಿ ಬಂದರಿನ ವಿಸ್ತರಣೆ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು. ಆದರೆ, ಸುದೀರ್ಘ ಐದು ವರ್ಷಗಳ ವಿಚಾರಣೆಯಿಂದ ಕೊನೆಗೂ ನ್ಯಾಯಾಲಯದ ಆದೇಶ ಬಂದರೂ, ಜಲಸಾರಿಗೆ ಮಂಡಳಿ ಪರವಾಗಿ ಬಂದಿದೆ. ಎನ್‌ಜಿಟಿಯಲ್ಲಿ ಕಾನೂನು ಪ್ರಕಾರವಾಗಿಯೇ ಬಂದರೂ ಕಾಮಗಾರಿ ನಡೆಸಲಾಗುತ್ತಿದೆ. ಅಧ್ಯಯನದ ವರದಿ ಆಧರಿಸಿ ನಮ್ಮ ಪರವಾಗಿಯೇ ಆದೆಶ ನೀಡಿದ್ದು ಇನ್ನೂ ಒಂದು ತಿಂಗಳೊಳಗಾಗಿ ಕಾಮಗಾರಿ ಆರಂಭಿಸಲಾಗುವುದು ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಮಪುರ ತಿಳಿಸಿದ್ದಾರೆ.
ಬಂದರು ವಿಸ್ತರಣೆ ಕಾಮಗಾರಿಗೆ ಪ್ರಾರಂಭಕ್ಕೆ ಮತ್ತೆ ಮೀನುಗಾರರಲ್ಲಿ ವಿರೋಧ ವ್ಯಕ್ತವಾಗತೊಡಗಿದೆ. ಈಗಾಗಲೇ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರು ಸೀಬರ್ಡ್ ಯೋಜನೆಯಿಂದ ನೆಲೆ ಕಳೆದುಕೊಂಡು ಕಾರವಾರ, ಅಲಿಗದ್ದಾ ಪ್ರದೇಶದಲ್ಲಿ ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸುತ್ತಿವೆ. ಆದರೆ, ಇಲ್ಲಿ ಬಂದರು ವಿಸ್ತರಣೆಯಾದರೆ ಮತ್ತೆ ಮೀನುಗಾರರು ನೆಲೆ ಕಳೆದುಕೊಂಡು ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ.
ಅಲ್ಲದೆ ಕಾರವಾರದ ಬೈತಕೋಲ ಬಂದರು ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಬಂದರಾಗಿದ್ದು, ಪ್ರತಿ ಮಳೆಗಾಲದ ವೇಳೆ ತುಫಾನ್ ಸೆರಿದಂತೆ ಇನ್ನಿತರ ಸಮಯದಲ್ಲಿ ಸುಮಾರು 2000 ಸ್ಥಳೀಯ ಹಾಗೂ ಹೊರ ರಾಜ್ಯಗಳ ಬೋಟ್ಗಳಿಗೆ ರಕ್ಷಣೆ ಒದಗಿಸುತ್ತವೆ. ಅಲ್ಲದೆ ಕಾರವಾರದ ಏಕೈಕ ಕಡಲತೀರದ ಸೌಂದರ್ಯ ಕೂಡ ಈ ಬಂದರು ವಿಸ್ತರಣೆಗೆ ಬಲಿಯಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನಾವು ಬಂದು ವಿಸ್ತರಣೆಗೆ ಅವಕಾಶ ನೀಡುವುದಿಲ್ಲ. ಇದೀಗ ನಮ್ಮ ಸಮುದಾಯದ ಮಂತ್ರಿಗಳೇ ಮೀನುಗಾರಿಕಾ ಸಚಿವರಾಗಿದ್ದು, ಅವರಿಗೂ ಈ ಬಗ್ಗೆ ಮನವಿ ಮಾಡಿ ಒಕ್ಕೊರಲಿನಲ್ಲಿ ನಾವು ಈ ಯೋಜನೆಯನ್ನು ವಿರೋಧಿಸುವುದಾಗಿ ಸ್ಥಳೀಯ ಮೀನುಗಾರ ಮುಖಂಡ ಚೇತನ್ ಹರಿಕಂತ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ದೇಶದ ಪ್ರಪ್ರಥಮ ಅಂತಾರಾಷ್ಟ್ರೀಯ CRUISE ಬಂದರು ನಿರ್ಮಿಸಲು ಯೋಜನೆ - INTERNATIONAL CRUISE PORT