ಚೆನ್ನೈ (ತಮಿಳುನಾಡು):ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಆರಂಭಿಕ ಹೈವೊಲ್ಟೇಜ್ ಪಂದ್ಯದಲ್ಲಿ ರನ್ ಮಷಿನ್ ಖ್ಯಾತಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ಗಳನ್ನು ಪೂರೈಸುವ ಮೂಲಕ ಭಾರತ ಮೊದಲ ಮತ್ತು ವಿಶ್ವದ ಆರನೇ ಬ್ಯಾಟರ್ ಆಗಿ ಕೊಹ್ಲಿ ಹೊರ ಹೊಮ್ಮಿದ್ದಾರೆ.
ಏಳನೇ ಓವರ್ ಮಾಡಲು ಬಂದ ಚೆನ್ನೈ ತಂಡದ ಪ್ರಮುಖ ಆಲ್ ರೌಂಡರ್ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ 2 ರನ್ ಗಳನ್ನು ಗಳಿಸಿದ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಮಾಜಿ ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್ ನಂತರ ಈ ಮೈಲಿಗಲ್ಲು ತಲುಪಿದ ವಿಶ್ವದ ಎರಡನೇ ಅತಿ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ತಮ್ಮ 377ನೇ ಪಂದ್ಯದಲ್ಲಿ 12 ಸಾವಿರ ರನ್‌ಗಳ ಗಡಿಯನ್ನು ತಲುಪಿದ್ದಾರೆ. ಕ್ರಿಸ್ ಗೇಲ್, ಪಾಕಿಸ್ತಾನದ ಮಾಜಿ ಬ್ಯಾಟರ್ ಶೋಯೆಬ್ ಮಲಿಕ್, ವೆಸ್ಟ್ ಇಂಡೀಸ್ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್ ಮತ್ತು ಸ್ವಾಶ್‌ಬಕ್ಲಿಂಗ್ ಬ್ಯಾಟರ್ ಡೇವಿಡ್ ವಾರ್ನರ್ ಅವರಿಗಿಂತ ಕೊಹ್ಲಿ ಹಿಂದಿದ್ದಾರೆ. ಆದರೆ, ಇವರಿಗಿಂತ ಕೊಹ್ಲಿ ಮಾತ್ರ 40 ಕ್ಕಿಂತ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ಈವರೆಗೆ ಟಿ-20 ಕ್ರಿಕೆಟ್‌ನಲ್ಲಿ ಒಟ್ಟು 8 ಶತಕಗಳನ್ನು ಸಿಡಿಸಿರುವ ಕೊಹ್ಲಿ, ಭಾರತದಲ್ಲೇ ಅತಿ ಹೆಚ್ಚು ಶತಕ ಹೊಡೆದಿರುವ ಆಟಗಾರರಾಗಿದ್ದಾರೆ. ಅವರ ವೃತ್ತಿ ಜೀವನದ ಅತ್ಯುತ್ತಮ ನಾಕ್ ಎಂದರೆ ಔಟಾಗದೇ 122 ರನ್ ಗಳಿಸಿರುವುದು. ರನ್ ಮಷಿನ್ ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಹೆಸರಿಗೆ ಹಲವು ದಾಖಲೆಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4037 ರನ್ಗಳು ಮತ್ತು ಟಿ20 ವಿಶ್ವಕಪ್‌ಗಳಲ್ಲಿ (1,141) ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.