Mohammed Siraj: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಭಾಗವಾಗಿ ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಅದ್ದೂರಿಯಾಗಿ ಐಪಿಎಲ್ ಮೆಗಾ ಹರಾಜು ನಡೆದಿತ್ತು. ಇದರಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು 639 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿ 182 ಆಟಗಾರರನ್ನು ಖರೀದಿಸಿವೆ. ಅದರಲ್ಲೂ ಆರ್ಸಿಬಿ ಈ ಬಾರಿ ಕಪ್ ಗೆಲ್ಲಲೇಬೆಕೆಂದು ಪಣ ತೊಟ್ಟಿದ್ದು, ಅಳೆದು ತೂಗಿ ಬಲಿಷ್ಠ ತಂಡವನ್ನು ಕಟ್ಟಿದೆ.
ಆದರೆ 2018 ರಿಂದಲೂ ಬೆಂಗಳೂರು ಪರ ಆಡುತ್ತಿದ್ದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆರ್ಸಿಬಿ ಈ ಬಾರಿ ತಂಡದಲ್ಲಿ ಉಳಿಸಿಕೊಳ್ಳಲಿಲ್ಲ. ಇದರ ಬೆನ್ನಲ್ಲೆ ಸಿರಾಜ್ ಅವರನ್ನು ತಂಡದಿಂದ ಕೈ ಬಿಡಬಾರದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.
ಸಿರಾಜ್ ಅವರನ್ನು ಗುಜರಾತ್ ಟೈಟಾನ್ಸ್ ಬಿಡ್ ಮಾಡಿದಾಗ, ಆರ್ಸಿಬಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸದೇ ಇರುವುದು ಅಚ್ಚರಿ ಮೂಡಿಸಿತ್ತು. ಇದರಿಂದಾಗಿ ಗುಜರಾತ್ ಟೈಟಾನ್ಸ್ ₹12.25 ಕೋಟಿ ಬಿಡ್ ಮಾಡುವ ಮೂಲಕ ಸಿರಾಜ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು. ಇದೀಗ RCB ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಸಿರಾಜ್ ಖರೀದಿಸದೇ ಇರುವುದಕ್ಕೆ ಕಾರಣ ತಿಳಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಳ್ಳದಿರುವ ಬಗ್ಗೆ ಅಳೆದು ತೂಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿರಾಜ್ RCB ಪರ ಅದ್ಭುತ ಪ್ರದರ್ಶನ ನೀಡಿದ್ದು, ಅವರನ್ನು ಬಿಡುಗಡೆ ನಿರ್ಧಾರ ನಮಗೆ ತುಂಬಾ ಕಷ್ಟಕರವಾಗಿತ್ತು. ಆದರೆ, ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸುವುದು ನಮ್ಮ ಆದ್ಯತೆಯಾಗಿತ್ತು. ಭುವಿ ನಮ್ಮ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು ಮತ್ತು ನಾವು ಅವನನ್ನು ಖರೀದಿಸಲು ಬಗ್ಗೆ ಮುಂಚಿತವಾಗಿಯೇ ನಿರ್ಧರಿಸಿದ್ದೆವು ." ಆದರೆ ಹರಾಜಿನ ನಿಯಮ ಮತ್ತು ಪರ್ಸ್ ಬೆಲೆ ಕಾರಣವಾಗಿ ನಮಗೆ ರೈಟ್ ಟು ಮ್ಯಾಚ್ ಕಾರ್ಡ್ ಬಳಸಲು ಸಾಧ್ಯವಾಗಲಿಲ್ಲ.
2018ರಿಂದ 2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಮೊಹಮ್ಮದ್ ಸಿರಾಜ್ 87 ಪಂದ್ಯಗಳಲ್ಲಿ 83 ವಿಕೆಟ್ ಪಡೆದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿರಾಜ್ ಈವರೆಗೂ 93 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 93 ವಿಕೆಟ್ಗಳನ್ನು ಪಡೆದಿದ್ದಾರೆ. 21 ರನ್ಗಳಿಗೆ 4 ವಿಕೆಟ್ ಪಡೆದಿರುವುದು ಇವರ ಬೆಸ್ಟ್ ಇನ್ನಿಂಗ್ಸ್ ಆಗಿದೆ.
ಇದನ್ನೂ ಓದಿ: 'ಪೃಥ್ವಿ ಶಾಗೆ ಹೊರಗಿನ ಶತ್ರುಗಳು ಯಾರೂ ಇಲ್ಲ, ಅವರು ತಮ್ಮ ಪಾಲಿಗೆ ತಾವೇ ಶತ್ರು'