ಚೆನ್ನೈ (ತಮಿಳುನಾಡು) : ಯುವತಿಯನ್ನು ರೈಲಿನಡಿ ತಳ್ಳಿ ಹತ್ಯೆ ಮಾಡಿದ್ದ ಪ್ರಕರಣದ ಯುವಕನಿಗೆ ತಮಿಳುನಾಡಿನ ಮಹಿಳಾ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅಕ್ಟೋಬರ್ 13, 2022 ರಂದು ಪರಂಗಿಮಲೈ ರೈಲು ನಿಲ್ದಾಣದಲ್ಲಿ ಚೆನ್ನೈ ತಾಂಬರಂ ಕಡೆಗೆ ಹೋಗುತ್ತಿದ್ದ ಎಲೆಕ್ಟ್ರಿಕ್ ರೈಲಿಗೆ ಯುವತಿಯನ್ನು ತಳ್ಳಿ ಸತೀಶ್ ಹತ್ಯೆ ಮಾಡಿದ್ದ. ಪ್ರಕರಣದ ವಿಚಾರಣೆ ನಡೆಸಿದ ಮಹಿಳಾ ವಿಶೇಷ ಕೋರ್ಟ್ನ ನ್ಯಾಯಾಧೀಶೆ ಶ್ರೀದೇವಿ ಅವರು, ಸತೀಶ್ನನ್ನು ಅಪರಾಧಿ ಎಂದು ಡಿಸೆಂಬರ್ 27 ರಂದು ಘೋಷಿಸಿ ತೀರ್ಪು ಕಾಯ್ದಿರಿಸಿದ್ದರು. ಇಂದು ಆದೇಶವನ್ನು ಪ್ರಕಟಿಸಿದರು.
ಜೈಲು ಶಿಕ್ಷೆ ಬಳಿಕ ಗಲ್ಲು: ಆದೇಶಾನುಸಾರ, ಅಪರಾಧಿ ಹತ್ಯೆಯಲ್ಲಿ ಪಾಲ್ಗೊಂಡಿದ್ದು ಸಾಬೀತಾಗಿದೆ. ಘೋರ ಅಪರಾಧ ಮಾಡಿದವರಿಗೆ ಕರುಣೆ ತೋರಲು ಸಾಧ್ಯವಿಲ್ಲ. ಅಪರಾಧಿ ಸತೀಶ್ಗೆ ಗಲ್ಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ ಒಂದು ವರ್ಷ ಜೈಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆದೇಶಿಸಿದ್ದಾರೆ.
ಅಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಬೇಕು. ಜೈಲು ಶಿಕ್ಷೆ ಅನುಭವಿಸಿದ ನಂತರ ಅಪರಾಧಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಮೃತ ಸತ್ಯಪ್ರಿಯಾ ಅವರ ಸಹೋದರಿಯರು ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದಾರೆ. ಹೀಗಾಗಿ, ತಮಿಳುನಾಡು ಸರ್ಕಾರ ಒಂದು ತಿಂಗಳಲ್ಲಿ ಅವರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದೂ ಇದೇ ವೇಳೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣದ ವಿವರ: ಚೆನ್ನೈನ ಪರಂಗಿಮಲೈ ಪೊಲೀಸ್ ಕ್ವಾರ್ಟಸ್ನಲ್ಲಿ ವಿದ್ಯಾರ್ಥಿನಿ ಸತ್ಯಪ್ರಿಯಾ ವಾಸವಿದ್ದರು. ಅದೇ ಫ್ಲಾಟ್ನಲ್ಲಿ ಅಪರಾಧಿ ಸತೀಶ್ ಉಳಿದುಕೊಂಡಿದ್ದ. ಈ ವೇಳೆ ಇಬ್ಬರಲ್ಲೂ ಪ್ರೀತಿ ಮೂಡಿತ್ತು. ಬಳಿಕ ಸತ್ಯಪ್ರಿಯಾ ಪೋಷಕರಿಗೆ ಹೆದರಿ ಪ್ರಿಯಕರನ ಜೊತೆ ಹಠಾತ್ ಸಂಪರ್ಕ ಕಡಿದುಕೊಂಡಿದ್ದಳು. ಇದರಿಂದ ಸತೀಶ್ ಕುಪಿತಗೊಂಡಿದ್ದ.
2022 ರ ಅಕ್ಟೋಬರ್ 13 ರಂದು ಕಾಲೇಜಿಗೆ ತೆರಳಲು ಪರಂಗಿಮಲೈ ರೈಲು ನಿಲ್ದಾಣಕ್ಕೆ ಬಂದಿದ್ದ ಸತ್ಯಪ್ರಿಯಾಳನ್ನು ಸತೀಶ್ ಎಲೆಕ್ಟ್ರಿಕ್ ರೈಲಿನ ಕೆಳಗೆ ನೂಕಿದ್ದ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸತೀಶ್ ವಿರುದ್ಧ 70 ಸಾಕ್ಷಿಗಳ ಸಮೇತ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ: ಕೇರಳ 'ಮಿನಿ ಪಾಕಿಸ್ತಾನ', ಉಗ್ರರ ಮತಗಳಿಂದ ರಾಹುಲ್, ಪ್ರಿಯಾಂಕಾ ಗೆದ್ದರು: ನಿತೇಶ್ ರಾಣೆ