ಲಕ್ನೋ(ಉತ್ತರ ಪ್ರದೇಶ):ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಅವರಿಬ್ಬರ ಅಜೇಯ 121 ರನ್ ಜೊತೆಯಾಟದ ಬಲದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಬೀಗಿತು.
ಲಕ್ನೋ ನೀಡಿದ 197 ರನ್ ಗುರಿಯೊಂದಿಗೆ ಕಣಕ್ಕಿಳಿದ ರಾಜಸ್ಥಾನ 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಸಂಜು ಸ್ಯಾಮ್ಸನ್ (ಅಜೇಯ 71) ಗರಿಷ್ಠ ಸ್ಕೋರರ್ ಎನಿಸಿದರು. ಯಶಸ್ವಿ ಜೈಶ್ವಾಲ್ (18 ಎಸೆತಗಳಲ್ಲಿ 24 ರನ್, 3 ಬೌಂಡರಿ ಮತ್ತು 1 ಸಿಕ್ಸರ್) ಮತ್ತು ಜೋಸ್ ಬಟ್ಲರ್ (18 ಎಸೆತಗಳಲ್ಲಿ 34 ರನ್, 4 ಬೌಂಡರಿ ಮತ್ತು 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ರಿಯಾನ್ ಪರಾಗ್ 11 ಎಸೆತಗಳಲ್ಲಿ 14 ರನ್ ಗಳಿಸಿದರು. ಕೊನೆಯಲ್ಲಿ ಬಂದ ಧ್ರುವ್ ಜುರೆಲ್ ಔಟಾಗದೆ 52 ರನ್ ಪೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಲಕ್ನೋ ತಂಡದ ಯಶ್ ಠಾಕೂರ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಲಕ್ನೋ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ತಂಡ ಉತ್ತಮ ಆರಂಭ ಪಡೆಯಿತು. ಆದರೆ, ಫಿನಿಶಿಂಗ್‌ನಲ್ಲಿ ಬ್ಯಾಟರ್‌ಗಳು ಅಬ್ಬರಿಸಲಿಲ್ಲ. ಹೀಗಾಗಿ ಸುಲಭವಾಗಿ 200 ಗಡಿ ದಾಟುವ ನಿರೀಕ್ಷೆಯಿದ್ದ ಸ್ಕೋರ್ 196ಕ್ಕೆ ನಿಂತಿತು. ಆರಂಭಿಕ ಕ್ವಿಂಟನ್ ಡಿ ಕಾಕ್ ಕೇವಲ 8 ರನ್ ಗಳಿಸಿ ಔಟಾದರು. ನಂತರ, ಕಳೆದ ಪಂದ್ಯದ ಶತಕದ ಹೀರೋ ಸ್ಟೊಯಿನಿಸ್ ಡಕ್ ಔಟ್ ಆರು. ಇದರಿಂದಾಗಿ ತಂಡ 11 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ನಾಯಕ ಕೆ.ಎಲ್.ರಾಹುಲ್ ಉತ್ತಮ ಇನಿಂಗ್ಸ್ ಆಡುವ ಮೂಲಕ ಸ್ಕೋರ್ ಹೆಚ್ಚಿಸಿದರು. 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಅವರಿಗೆ ಹೂಡಾ (31 ಎಸೆತಗಳಲ್ಲಿ 50 ರನ್, 7 ಬೌಂಡರಿ) ಉತ್ತಮ ಬೆಂಬಲ ನೀಡಿದರು. ಇದರೊಂದಿಗೆ ತಂಡ 12 ಓವರ್‌ಗಳಲ್ಲಿ 126 ರನ್‌ಗಳ ಗಡಿ ದಾಟಿತು. ಹೂಡಾ ಮತ್ತು ರಾಹುಲ್ ಔಟಾದ ನಂತರ, ತಂಡದ ಸ್ಕೋರ್ ನಿಧಾನವಾಗಿ ಸಾಗಿತು. ಪೂರನ್ (11), ಆಯುಷ್ ಬದೋನಿ (ಔಟಾಗದೆ 18), ಕೃನಾಲ್ ಪಾಂಡ್ಯ (ಔಟಾಗದೆ 15) ರನ್ ಗಳಿಸಿದರು. ಇದರೊಂದಿಗೆ ಲಕ್ನೋ 196 ರನ್‌ಗಳಿಗೆ ಇನಿಂಗ್ಸ್ ಅಂತ್ಯಗೊಂಡಿತು.
ಆರ್ಆರ್ ತಂಡದ ಬೌಲರ್‌ಗಳಲ್ಲಿ ಸಂದೀಪ್ ಶರ್ಮಾ 2 ವಿಕೆಟ್, ಬೌಲ್ಟ್, ಅವೇಶ್ ಖಾನ್ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.
ಕೆ.ಎಲ್.ರಾಹುಲ್ ದಾಖಲೆ:ಕೆ.ಎಲ್.ರಾಹುಲ್ ಐಪಿಎಲ್ನಲ್ಲಿ ಆರಂಭಿಕರಾಗಿ 4,000 ಸಾವಿರ ರನ್ ಪೂರೈಸಿದರು. ಅತಿ ಹೆಚ್ಚು ರನ್ ಗಳಿಸಿದ ಆರಂಭಿಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಶಿಖರ್ ಧವನ್ (202 ಇನ್ನಿಂಗ್ಸ್‌ಗಳಲ್ಲಿ 6,362 ರನ್) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ 5,909 ರನ್ ಮತ್ತು ಗೇಲ್ 4,480 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಭಾನುವಾರ TCS ವರ್ಲ್ಡ್ 10K ಮ್ಯಾರಥಾನ್: ಹಲವೆಡೆ ಮಾರ್ಗ ಬದಲಾವಣೆ - BENGALURU 10K MARATHON