ಚೆನ್ನೈ(ತಮಿಳುನಾಡು):ಸೋಲಿನೊಂದಿಗೆ ಪ್ರಸಕ್ತ ಸಾಲಿನ IPL ಅಭಿಯಾನ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡ, ಬಳಿಕ ಸತತ ಗೆಲುವಿನೊಂದಿಗೆ ಭರ್ಜರಿ ಕಂಬ್ಯಾಕ್ ಮಾಡಿದೆ. ತಂಡದ ಆಟಗಾರರು ಹಿಂದೆಂದೂ ಕಾಣದ ರೀತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇನ್ನೊಂದೆಡೆ, ಏಳು-ಬೀಳುಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿರುವ ರಾಜಸ್ಥಾನ್ ರಾಯಲ್ಸ್(ಆರ್‌ಆರ್) ಇತ್ತೀಚಿಗೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು ಬಗ್ಗುಬಡಿದು 2ನೇ ಕ್ವಾಲಿಫೈಯರ್‌ಗೆ ಎಂಟ್ರಿ ಕೊಟ್ಟಿದೆ.
ಇಂದು ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವೆ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಫೈನಲ್ ಪ್ರವೇಶಿಸಲು ಪೈಪೋಟಿ ನಡೆಸಲಿವೆ.
ಹೈದರಾಬಾದ್- ಶಕ್ತಿ, ದೌರ್ಬಲ್ಯ ಹೈದರಾಬಾದ್ ತಂಡಕ್ಕೆ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ, ಮಾರ್ಕ್ರಾಮ್, ಅಬ್ದುಲ್ ಸಮದ್ ಮತ್ತು ಶಹಬಾಜ್ ಅಹ್ಮದ್ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇನ್ನು, ಭುವನೇಶ್ವರ್ ಕುಮಾರ್, ನಟರಾಜನ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರಂಥ ಪ್ರಮುಖ ವೇಗಿಗಳನ್ನು ತಂಡ ಹೊಂದಿದೆ. ಆದರೆ, ಚೆನ್ನೈ ಪಿಚ್ ಸ್ಪಿನ್ ಪರವಾಗಿದ್ದು, ಹೈದರಾಬಾದ್ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಬಲ್ಲ ಸ್ಪಿನ್ನರ್ ಇಲ್ಲ. ಇದು ತಂಡದ ತಲೆನೋವು ಹೆಚ್ಚಿಸಬಹುದು. ಇನ್ನು ವಾಷಿಂಗ್ಟನ್ ಸುಂದರ್/ಮಯಾಂಕ್ ಮಾರ್ಕಾಂಡೆಗೆ ಇಂದು ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕು.
ರಾಜಸ್ಥಾನ-ಶಕ್ತಿ, ದೌರ್ಬಲ್ಯ: ಈ ಋತುವಿನ ಆರಂಭದಲ್ಲಿ ರಾಜಸ್ಥಾನ ಸತತ ಗೆಲುವುಗಳನ್ನು ಕಂಡಿತ್ತು. ಮೊದಲಾರ್ಧದಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿತ್ತು. ಆದರೆ, ಅಚ್ಚರಿ ಎಂಬಂತೆ ದ್ವಿತೀಯಾರ್ಧದಲ್ಲಿ ಕೊಂಚ ಎಡವಿದೆ. ಎಲಿಮಿನೇಟರ್ ಹೊರತುಪಡಿಸಿ ರಾಜಸ್ಥಾನ ಆಡಿದ ಕೊನೆಯ 6 ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ಐದರಲ್ಲಿ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇತ್ತೀಚೆಗೆ ಆರ್‌ಸಿಬಿ ವಿರುದ್ಧ ಎಲಿಮಿನೇಟರ್‌ನಲ್ಲಿ ಪುನರಾಗಮನ ಮಾಡಿತ್ತು.