ಹೈದರಾಬಾದ್:ಐಪಿಎಲ್ನಲ್ಲಿ ಪ್ಲೇಆಫ್ಗೇರಲು ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ಜೈಂಟ್ಸ್ ತಂಡ ವಿಫಲವಾಗಿದೆ. ಲೀಗ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೂರ್ನಿಗೆ ಗುಡ್ಬೈ ಹೇಳಿತು.
17ನೇ ಆವೃತ್ತಿಯಲ್ಲಿ ತಂಡದ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ನಾಯಕ ಕೆಎಲ್ ರಾಹುಲ್ ಕೂಡ ಗಮನಾರ್ಹ ಆಟವಾಡಿಲ್ಲ. ಆಡಿದ 14 ಪಂದ್ಯಗಳಲ್ಲಿ ತಲಾ 7 ಗೆಲುವು, ಸೋಲು ಕಂಡು 14 ಪಾಯಿಂಟ್ಸ್ನೊಂದಿಗೆ ಟೂರ್ನಿಯಿಂದ ಹೊರಬಿತ್ತು. ರನ್ರೇಟ್ ತೀರಾ ಕಡಿಮೆ ಇರುವ ಕಾರಣ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ.
ಐಪಿಎಲ್ ಟೂರ್ನಿ ಮುಗಿದ ಬಳಿಕ ಟಿ-20 ವಿಶ್ವಕಪ್ ಆರಂಭವಾಗಲಿದ್ದು, ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿಲ್ಲ. ಕಳೆದ ಬಾರಿ ಉಪ ನಾಯಕನ ಸ್ಥಾನ ಪಡೆದಿದ್ದ ಆಟಗಾರ, ಈ ಬಾರಿ ಕನಿಷ್ಠ ತಂಡದಲ್ಲೂ ಕಾಣಿಸಿಕೊಂಡಿಲ್ಲ. ಮುಂಬೈ ಎದುರಿನ ಪಂದ್ಯ ಮುಗಿದ ಬಳಿಕ ಪ್ರಸಾರಕರ ಜೊತೆ ಮಾತನಾಡುತ್ತಿದ್ದಾಗ, "ಟೂರ್ನಿ ಮುಗಿದ ಬಳಿಕ ಏನು ಮಾಡುತ್ತೀರಾ" ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ತಮಾಷೆಯಾಗಿತ್ತು.
"ವಿಶ್ವಕಪ್ನಲ್ಲಿ ನಾನು ಸ್ಥಾನ ಪಡೆದಿಲ್ಲ. ಹೀಗಾಗಿ, ನನ್ನ ಮಾವ ಸುನಿಲ್ ಶೆಟ್ಟಿ ಅವರ ಜೊತೆಗೂಡಿ ಮೈದಾನದ ಹೊರಗೆ ಕುಳಿತು ರೋಹಿತ್ ಶರ್ಮಾ ಅಂಡ್ ಕಂಪನಿಯನ್ನು ಪ್ರೋತ್ಸಾಹಿಸುತ್ತೇವೆ" ಎಂದರು. ಐಪಿಎಲ್ ಮುಗಿದಿದ್ದು, ನನ್ನ ಮಾವ ಸುನಿಲ್ ಶೆಟ್ಟಿ ಅವರ ಬೆಂಬಲ ಸಿಕ್ಕಿದೆ. ಹೀಗಾಗಿ ನಾವಿಬ್ಬರೂ ಭಾರತ ತಂಡವನ್ನು ಚಿಯರ್ ಮಾಡುತ್ತೇವೆ ಎಂದು ವಾಂಖೆಡೆ ಕ್ರೀಡಾಂಗಣದಲ್ಲಿ ಹೇಳಿದರು.
ಸುನಿಲ್ ಶೆಟ್ಟಿ ಪ್ರಸ್ತಾಪವೇಕೆ?:ಐಪಿಎಲ್ ಆರಂಭಕ್ಕೂ ಮುನ್ನ ಆಯಾ ತಂಡಗಳು ಪ್ರಚಾರ ವಿಡಿಯೋ ಬಿಡುಗಡೆ ಮಾಡಿದ್ದವು. ಮುಂಬೈ ಇಂಡಿಯನ್ಸ್ ತಂಡದ ವಿಡಿಯೋದಲ್ಲಿ ರೋಹಿತ್ ಶರ್ಮಾ, ನಟ ಸುನಿಲ್ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದರು. ಅದರಲ್ಲಿ ರೋಹಿತ್ ಮತ್ತು ಸುನಿಲ್ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದಾಗ ರಾಹುಲ್ ಆಗಮಿಸುತ್ತಾರೆ. ಆಗ ರಾಹುಲ್ರನ್ನು ತಡೆಯುವ ಸುನಿಲ್ ನೀನೀಗ ಬೇರೆ ತಂಡ, ನಮ್ಮ ಮುಂಬೈ ತಂಡದ ರೋಹಿತ್ಗೆ ನನ್ನ ಪ್ರಮುಖ ಆದ್ಯತೆ ಎನ್ನುತ್ತಾರೆ.
ಸಂಬಂಧಿಗಳಾಗಿದ್ದರೂ, ಐಪಿಎಲ್ ಮುಗಿಯುವವರೆಗೂ ನಾವು ಬೇರೆ ಬೇರೆ. ಅಳಿಯನ ಬದಲಿಗೆ ಸ್ಥಳೀಯ ತಂಡದ ಆಟಗಾರ ಮುಖ್ಯ ಎಂದು ಸುನಿಲ್ ಶೆಟ್ಟಿ ಅದರಲ್ಲಿ ಹೇಳುತ್ತಾರೆ. ಇದೀಗ, ಈ ಜಾಹೀರಾತನ್ನೇ ಪ್ರಸ್ತಾಪಿಸಿರುವ ಕೆಎಲ್ ರಾಹುಲ್ ತಮಾಷೆಯ ಹೇಳಿಕೆ ನೀಡಿದ್ದಾರೆ. ಜೂನ್ 2 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಸಲದ ವಿಶ್ವಕಪ್ ಗೆಲ್ಲುವ ಗುರಿ ಹೊಂದಿದೆ. ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ:ಇಂಪ್ಯಾಕ್ಟ್ ಪ್ಲೇಯರ್ ನಿಯಮ ಆಟದ ಸಮತೋಲನ ಹಾಳು ಮಾಡುತ್ತೆ: ವಿರಾಟ್ ಕೊಹ್ಲಿ - Virat Kohli