ವಿಶಾಖಪಟ್ಟಣಂ (ಆಂಧ್ರಪ್ರದೇಶ): ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದೆಹಲಿ ಕ್ಯಾಪಿಟಲ್ಸ್ (ಡಿಸಿ) ನಾಯಕ ರಿಷಭ್ ಪಂತ್ ಅವರಿಗೆ ದಂಡ ವಿಧಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಂತ್ಗೆ ಬರೋಬ್ಬರಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
"ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರಿಂದ ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ಮೂಲಗಳು ತಿಳಿಸಿವೆ.
"ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ಬೌಲಿಂಗ್ ವೇಳೆ ಸ್ಲೋ ಓವರ್ ರೇಟ್ ತಪ್ಪು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ ಸಮಯದೊಳಗೆ ಪಂದ್ಯ ಮುಗಿಸಿರಲಿಲ್ಲ. ಈ ಕಾರಣಕ್ಕಾಗಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ."
ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ ಕಡಿತ ಮಾಡಲಾಗುತ್ತದೆ. ಹಾಗೆಯೇ ಈ ತಪ್ಪನ್ನು ಮಾಡಿದ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ, ವಾರ್ನರ್, ರಿಷಭ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 191 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. 35 ಎಸೆತ ಎದುರಿಸಿದ ಡೇವಿಡ್ ವಾರ್ನರ್ ಐದು ಬೌಂಡರಿ ಮತ್ತು ಮೂರು ಸಿಕ್ಸರ್ ಸಹಿತ 52 ರನ್ ಗಳಿಸಿದರೆ, ಪೃಥ್ವಿ ಶಾ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸ್ ನೆರವಿನಿಂದ 43 ರನ್ ಗಳಿಸಿ ಅರ್ಧ ಶತಕದಿಂದ ವಂಚಿತರಾದರು. ಈ ಜೋಡಿ 93 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿತು. ಇವರ ಬಳಿಕ ಕ್ರೀಸ್ಗೆ ಇಳಿದ ರಿಷಭ್ ಪಂತ್ 32 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ಗಳೊಂದಿಗೆ 51 ರನ್ ಚಚ್ಚಿ ಅರ್ಧಶತಕ ಪೂರೈಸಿ ಜಡೇಜಾಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಉಳಿದಂತೆ ಮಾರ್ಷ್ (18), ಅಕ್ಸರ್ (7), ಅಭಿಷೇಕ್ ಪೊರೆಲ್ (9) ಬ್ಯಾಟಿಂಗ್ ನೆರವಿನಿಂದ ಮೊದಲ ಇನಿಂಗ್ಸ್ನ ಮುಕ್ತಾಯಕ್ಕೆ ಡೆಲ್ಲಿ 191 ರನ್ಗಳ ಕಲೆ ಹಾಕಿತು. ಚೆನ್ನೈ ಪರ ವೇಗಿ ಮತಿಶ ಪಥಿರಾನ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮತ್ತು ಮುಸ್ತಾಫಿಜುರ್ ರೆಹಮಾನ್ ತಲಾ 1 ವಿಕೆಟ್ ಉರುಳಿಸಿದರು.
ಇದಕ್ಕೆ ಉತ್ತರವಾಗಿ 20 ಓವರ್ಗಳಲ್ಲಿ ಚೆನ್ನೈ ತಂಡ 6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಅಜಿಂಕ್ಯ ರಹಾನೆ ಅತ್ಯಧಿಕ 45 ರನ್ಗಳಿಸಿದರೆ, ಡ್ಯಾರೆಲ್ ಮಿಚೆಲ್ (34), ದುಬೆ 18 ರನ್ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ತಂಡದ ಗೆಲುವಿಗಾಗಿ ಜಡೇಜಾ (21*) ಮತ್ತು ಧೋನಿ (37*) ಹೊರಾಟ ನಡೆಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಧೋನಿ ಈ ಋತುವಿನಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದ್ದು, 16 ಎಸೆತದಲ್ಲಿ 4 ಬೌಂಡರಿ ಮತ್ತು 3 ಸಿಕ್ಸ್ರ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಆದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ನಾಲ್ಕು ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದೆಹಲಿ ಕ್ಯಾಪಿಟಲ್ಸ್ ಒಂದು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಎರಡು ಅಂಕಗಳ ಸಹಿತ ಏಳನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ವೈಜಾಗ್ನಲ್ಲಿ ಗೆಲುವಿನ ಖಾತೆ ತೆರೆದ ಡೆಲ್ಲಿ: ಸಿಎಸ್ಕೆ ವಿಜಯದ ಓಟಕ್ಕೆ ಬ್ರೇಕ್ - DC Won Against CSK