IND vs IRE:ಐರ್ಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು ಅತಿ ಹೆಚ್ಚು ರನ್ ಗಳಿಸಿ ದಾಖಲೆ ಬರೆದಿದ್ದಾರೆ.
370 ರನ್! ಭಾರತೀಯ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ: ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬೃಹತ್ 370 ರನ್ ಪೇರಿಸಿತು. ಇದು ಭಾರತೀಯ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಅತ್ಯಧಿಕ ಸ್ಕೋರ್ ಆಗಿದೆ.
ತಂಡದ ಪರ ಜೆಮಿಮಾ ರೊಡ್ರಿಗಸ್ (102) ತಮ್ಮ ಚೊಚ್ಚಲ ಏಕದಿನ ಶತಕ ಗಳಿಸಿದರೆ, ಆರಂಭಿಕರಾದ ಸ್ಮೃತಿ ಮಂಧಾನ (73), ಪ್ರತೀಕಾ ರಾವಲ್ (67) ಮತ್ತು ಹರ್ಲೀನ್ ಡಿಯೋಲ್ (89) ಅರ್ಧಶತಕ ಸಿಡಿಸಿದರು. ರಿಚಾ ಘೋಷ್ (10) ವೇಗವಾಗಿ ಆಡಲು ಪ್ರಯತ್ನಿಸಿ ವಿಕೆಟ್ ಕೈಚೆಲ್ಲಿದರು.
ಐರಿಶ್ ಬೌಲರ್‌ಗಳಲ್ಲಿ ಓರ್ಲಾ, ಕೆಲ್ಲಿ ತಲಾ 2 ವಿಕೆಟ್ ಪಡೆದರೆ ಡೆಂಪ್ಸೆ ಒಂದು ವಿಕೆಟ್ ಉರುಳಿಸಿದರು.
ಸ್ಮೃತಿ ಮಂಧಾನ ಸ್ಪೋಟಕ ಬ್ಯಾಟಿಂಗ್:ಆರಂಭಿಕರಾಗಿ ಬ್ಯಾಟಿಂಗ್ಗಿಳಿದ ಸ್ಮೃತಿ ಮಂಧಾನ ಸ್ಪೋಟಕ ಪ್ರದರ್ಶನ ನೀಡಿದರು. ಐರಿಶ್ ಬೌಲರ್ಗಳನ್ನು ಬೆಂಡೆತ್ತಿದ ಅವರು 54 ಎಸೆತಗಳನ್ನು ಎದುರಿಸಿ ಅರ್ಧಶತಕ ಸಮೇತ 73 ರನ್ ಬಾರಿಸಿದರು. ಇವರ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ಗಳಿದ್ದವು.
ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಜೆಮಿಮಾ:ಆರಂಭಿಕ ಬ್ಯಾಟರ್ ನಿರ್ಗಮಿಸಿದ ಬಳಿಕ ಕ್ರೀಸಿಗೆ ಆಗಮಿಸಿದ ಜೆಮಿಮಾ, ಹಾರ್ಲೀನ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರೂ ಮೂರನೇ ವಿಕೆಟ್‌ಗೆ 183 ರನ್‌ಗಳ ಜೊತೆಯಾಟವಾಡಿದರು. ಹರ್ಲೀನ್ 89 ರನ್ ಗಳಿಸಿದರೆ, ಜೆಮಿಮಾ 90 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಜೆಮಿಮಾ ಕ್ರಿಕೆಟ್ ವೃತ್ತಿಜೀವನದ ಮೊದಲ ಶತಕವೂ ಹೌದು. ಅಲ್ಲದೇ, ಏಕದಿನ ಸ್ವರೂಪದಲ್ಲಿ ಭಾರತೀಯ ಮಹಿಳೆ ಸಿಡಿಸಿದ ಎರಡನೇ ಜಂಟಿ ವೇಗದ ಶತಕವೂ ಆಗಿದೆ.
ಹರ್ಮನ್ಪ್ರೀತ್ ಕೌರ್ ಈ ಸ್ವರೂಪದಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಮಹಿಳೆಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಕೌರ್ 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 89 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ 90 ಎಸೆತಗಳಲ್ಲಿ ಎರಡನೇ ವೇಗದ ಶತಕ ದಾಖಲಿಸಿದ್ದರು.
19 ಓವರ್‌ಗಳಲ್ಲಿ 156 ರನ್:ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್ 156 ರನ್‌ಗಳ ಜೊತೆಯಾಟವಾಡಿದರು. ಮೊದಲ ಓವರ್‌ನಿಂದಲೇ ಆಕ್ರಮಣಕಾರಿಯಾಗಿ ಆಡಿದ ಇಬ್ಬರೂ ಕೇವಲ 19 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 156 ರನ್‌ಗಳ ಜೊತೆಯಾಟವಾಡಿದರು.
ಇದನ್ನೂ ಓದಿ:ಆರ್‌ಸಿಬಿ ಆಟಗಾರರ ಗೋಲು: ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ!