New Zealand Squad: ಮುಂದಿನ ತಿಂಗಳು ಪ್ರಾರಂಭವಾಗಲಿರುವ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ನ್ಯೂಜಿಲೆಂಡ್ 15 ಆಟಗಾರರನ್ನು ಒಳಗೊಂಡ ಬಲಿಷ್ಠ ತಂಡವನ್ನು ಭಾನುವಾರ ಪ್ರಕಟಿಸಿದೆ.
ಫೆ.19 ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ಆರಂಭವಾಗಲಿವೆ. ಈ ಮಹತ್ವದ ಸರಣಿಯಲ್ಲಿ ಭಾರತ ಸೇರಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಎ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳಿದ್ದರೇ, ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಇವೆ.
Ready for Pakistan and UAE 🏏 #ChampionsTrophy pic.twitter.com/Q4tbhqm0xi
— BLACKCAPS (@BLACKCAPS) January 11, 2025
ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದ್ದು ಮೂರು ಮೈದಾನಗಳಾದ ಕರಾಚಿ, ರಾವಲ್ಪಿಂಡಿ, ಲಾಹೋರ್ ಗಳಲ್ಲಿ ಪಂದ್ಯಗಳು ನಡೆಯಲಿವೆ. ಭಾರತದ ಪಂದ್ಯಗಳು ಹೈಬ್ರಿಡ್ ಮಾದರಿಯಲ್ಲಿ, ದುಬೈನಲ್ಲಿ ನಡೆಯುತ್ತವೆ. ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಆರಂಭಿಕ ಪಂದ್ಯವನ್ನು ಆಡುವುದರೊಂದಿಗೆ ಕಿವೀಸ್ ಪಡೆ ತನ್ನ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಪ್ರಾರಂಭಿಸಲಿದೆ.
ಏತನ್ಮಧ್ಯೆ, ಚಾಂಪಿಯನ್ಸ್ ಟ್ರೋಫಿಗಾಗಿ 15 ಸದಸ್ಯರನ್ನು ಒಳಗೊಂಡ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದೆ. ಈ ಟೂರ್ನಿಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ಗೆ ವಹಿಸಲಾಗಿದೆ. ಸ್ಯಾಂಟ್ನರ್ಗೆ ನಾಯಕನಾಗಿ ಇದು ಮೊದಲ ಐಸಿಸಿ ಟೂರ್ನಿಯಾಗಿದೆ. ಜೊತೆಗೆ ಮಾಜಿ ನಾಯಕ ಕೇನ್ ವಿಲಿಯಮ್ಸನ್, ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಮತ್ತು ವೇಗಿ ಲೋಕಿ ಫರ್ಗುಸನ್ ಕೂಡ ತಂಡಕ್ಕೆ ಮರಳಿದ್ದಾರೆ.
ವರ್ಷದ ಬಳಿಕ ಮೂವರ ಪುನರಾಗಮನ : ಮಾಜಿ ನಾಯಕ ಕೇನ್ ವಿಲಿಯಮ್ಸನ್, ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಮತ್ತು ವೇಗಿ ಲೋಕಿ ಫರ್ಗುಸನ್ ಒಂದು ವರ್ಷದ ಬಳಿಕ ಏಕದಿನ ತಂಡಕ್ಕೆ ಮರಳಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ನೊಂದಿಗಿನ ಒಪ್ಪಂದದಿಂದಾಗಿ ಏಕದಿನ ಪಂದ್ಯಗಳಿಂದ ಈ ಮೂವರು ಆಟಗಾರರು ಹೊರಗುಳಿದಿದ್ದರು. 2023ರಲ್ಲಿ ಭಾರತದ ವಿರುದ್ಧ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಈ ಮೂವರು ಯಾವುದೇ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ನ್ಯೂಜಿಲೆಂಡ್‌ನ ತಂಡ : ಮಿಚೆಲ್ ಸ್ಯಾಂಟ್ನರ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೆ, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಮಾರ್ಕ್ ಚಾಪ್ಮನ್, ಮೈಕೆಲ್ ಬ್ರೇಸ್ವೆಲ್, ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ನಾಥನ್ ಸ್ಮಿತ್, ಬೆನ್ ಸಿಯರ್ಸ್, ವಿಲ್ ಓ ರಾರ್ಕಿ, ಲಾಕಿ ಫರ್ಗುಸನ್.
ನ್ಯೂಜಿಲೆಂಡ್ ಪಂದ್ಯಗಳು
- ಫೆಬ್ರವರಿ 19 - ಪಾಕಿಸ್ತಾನ vs ನ್ಯೂಜಿಲೆಂಡ್, ಕರಾಚಿ
- ಫೆಬ್ರವರಿ 24 - ಬಾಂಗ್ಲಾದೇಶ vs ನ್ಯೂಜಿಲೆಂಡ್, ರಾವಲ್ಪಿಂಡಿ
- ಮಾರ್ಚ್ 2 - ಭಾರತ vs ನ್ಯೂಜಿಲೆಂಡ್, ದುಬೈ
ಇದನ್ನೂ ಓದಿ: ಜೆಮಿಮಾ ರೊಡ್ರಿಗಸ್ ಚೊಚ್ಚಲ ಶತಕ: ಐರ್ಲೆಂಡ್ ವಿರುದ್ಧ 370 ರನ್ ಪೇರಿಸಿ ದಾಖಲೆ ಬರೆದ ಟೀಂ ಇಂಡಿಯಾ!