ನ್ಯೂಯಾರ್ಕ್:ಟಿ20 ವಿಶ್ವಕಪ್ 25ನೇ ಪಂದ್ಯದಲ್ಲಿಂದು ಭಾರತ ಮತ್ತು ಅಮೆರಿಕ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯವು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಎರಡು ತಂಡಗಳ ನಡುವೆ ಈವರೆಗೆ ಒಂದೇ ಒಂದು ಪಂದ್ಯ ನಡೆದಿಲ್ಲ. ಭಾರತ ಮತ್ತು ಅಮೆರಿಕ ತಂಡಗಳು ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು.
ಈ ಪಂದ್ಯದಲ್ಲಿ ಯಾವುದೇ ತಂಡ ಗೆಲುವು ಸಾಧಿಸಿದರೂ ಸೂಪರ್-8ಗೆ ಅರ್ಹತೆ ಪಡೆಯಲಿದೆ. ಅಮೆರಿಕಾಗೆ ಟೀಮ್ ಇಂಡಿಯಾ ಪ್ರಬಲ ಸ್ಪರ್ಧಿಯಾಗಿದೆ. ಮತ್ತೊಂದೆಡೆ ಪಾಕಿಸ್ತಾನದ ಅಭಿಮಾನಿಗಳು ಭಾರತದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ವಾಸ್ತವವಾಗಿ ಪಾಕಿಸ್ತಾನ ಸೂಪರ್ 8ಗೆ ಅರ್ಹತೆ ಪಡೆಯಲು ಅದು ತನ್ನ ಉಳಿದಿರುವ ಒಂದು ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಮತ್ತು ಅಮೆರಿಕವು ತನ್ನ ಉಳಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಬೇಕಿದೆ.
ಹಾಗಿದ್ದಲ್ಲಿ ಮಾತ್ರ ಪಾಕ್ ಸೂಪರ್ 8ಗೆ ಅರ್ಹತೆ ಪಡೆಯಲಿದೆ. ಸದ್ಯ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಭಾರತ ಹಾಗೂ ಅಮೆರಿಕ ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಪಡೆದಿವೆ. ಭಾರತ ಅಗ್ರಸ್ಥಾನದಲ್ಲಿದ್ದರೆ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಪಾಕಿಸ್ತಾನ ಆಡಿದ 3 ಪಂದ್ಯಗಳ ಪೈಕಿ 2ರಲ್ಲಿ ಸೋಲನುಭವಿಸಿ 1ರಲ್ಲಿ ಗೆದ್ದು 3ನೇ ಸ್ಥಾನಕ್ಕೆ ತಲುಪಿದೆ.
ಪಿಚ್ ವರದಿ:ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಮೈದಾನದಲ್ಲಿ ಡ್ರಾಪ್ ಇನ್ ಪಿಚ್ ಅನ್ನು ಬಳಸಲಾಗುತ್ತಿದೆ. ಇದರಿಂದಾಗಿ ಬೌಲರ್ಗಳು ಹೆಚ್ಚಿನ ನೆರವನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಈ ಮೈದಾನದಲ್ಲಿ 7 ಪಂದ್ಯಗಳು ನಡೆದಿದ್ದು, ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡಗಳು 3 ಬಾರಿ ಗೆಲುವು ಸಾಧಿಸಿದ್ದರೆ, ಮೊದಲು ಬೌಲ್ ಮಾಡಿದ ತಂಡಗಳು 4 ಬಾರಿ ಗೆಲುವು ಸಾಧಿಸಿವೆ. ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 107 ಆಗಿದ್ದರೆ, ಎರಡನೇ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 105 ಆಗಿದೆ. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಸ್ಕೋರ್ 137 ಆಗಿದ್ದು, 77 ಕನಿಷ್ಠ ಸ್ಕೋರ್ ಆಗಿದೆ.