ದುಬೈ: ಬಾಂಗ್ಲಾದೇಶ ವಿರುದ್ಧ 2-0 ಸರಣಿ ಕ್ಲೀನ್ಸ್ವೀಪ್ ಸಾಧಿಸಿದ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಭರ್ಜರಿ ಏರಿಕೆ ಕಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನಂಬರ್ 1 ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರಿದರೆ, ತಂಡದ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬೂಮ್ರಾ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ.
ಮಳೆಬಾಧಿತ ಕಾನ್ಪುರ ಟೆಸ್ಟ್‌ನಲ್ಲಿ ಭಾರತದ ಆಟಗಾರರು ತೋರಿದ ದಿಟ್ಟ ಪ್ರದರ್ಶನದಿಂದ ಬಾಂಗ್ಲಾದೇಶವನ್ನು ಎರಡೇ ದಿನದಲ್ಲಿ ಕಟ್ಟಿಹಾಕಿತು. ಬೂಮ್ರಾ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ಮಾರಕ ಪ್ರದರ್ಶನ ನೀಡಿದರು. ಇದರಿಂದ ರ್ಯಾಂಕಿಂಗ್ನಲ್ಲೂ ಪ್ರಗತಿ ಸಾಧಿಸಿ, ಭಾರತದವರೇ ಆದ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿ ನಂಬರ್ 1 ಪಟ್ಟವನ್ನು ಪಡೆದುಕೊಂಡರು. ಇದಕ್ಕೂ ಮೊದಲು ಬೂಮ್ರಾ 2 ನೇ ಸ್ಥಾನದಲ್ಲಿದ್ದರು.
ಸದ್ಯ ಬೂಮ್ರಾ 870 ಟೆಸ್ಟ್ ರೇಟಿಂಗ್ ಹೊಂದಿದ್ದಾರೆ. 869 ರೇಟಿಂಗ್ನೊದಿಗೆ 1 ಸ್ಥಾನ ಕುಸಿದ ರವಿಚಂದ್ರನ್ ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ 6ನೇ ಸ್ಥಾನದಲ್ಲಿ ಮುಂದುವರೆದಿದ್ದು, ಯಾವುದೇ ಬದಲಾವಣೆಯಾಗಿಲ್ಲ. ಇನ್ನೊಬ್ಬ ಸ್ಪಿನ್ನರ್ ಕುಲದೀಪ್ ಯಾದವ್ 16ನೇ ಸ್ಥಾನದಲ್ಲಿ ಉಳಿದಿದ್ದಾರೆ.
A new No.1 ranked bowler is crowned as India's Test stars rise the latest rankings 😯https://t.co/6xcPtYGiFW
— ICC (@ICC) October 2, 2024
ಜೈಸ್ವಾಲ್ ಜೈತ್ರಯಾತ್ರೆ: ಬಾಂಗ್ಲನ್ನರನ್ನು ಇನ್ನಿಲ್ಲದಂತೆ ಕಾಡಿದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ವೃತ್ತಿ ಜೀವನದ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ. ಕೇವಲ 11 ಟೆಸ್ಟ್ ಆಡಿರುವ ಎಡಗೈ ಬ್ಯಾಟರ್ 792 ರೇಟಿಂಗ್ನೊಂದಿಗೆ ಮೂರನೇ ಸ್ಥಾನ ಸಂಪಾದಿಸಿದ್ದಾರೆ. ಎರಡೂ ಇನಿಂಗ್ಸ್ನಲ್ಲಿ 72 ಮತ್ತು 51 ರನ್‌ಗಳ ಬಾರಿಸಿ ಅಮೋಘ ಆಟವಾಡಿದ್ದರು.
ಭಾರತದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಕಾನ್ಪುರ ಪಂದ್ಯದಲ್ಲಿ ಎರಡು ಇನಿಂಗ್ಸ್ನಲ್ಲಿ 47 ಮತ್ತು 29 ರನ್‌ಗಳನ್ನು ಬಾರಿಸುವ ಮೂಲಕ 6 ಸ್ಥಾನ ಜಿಗಿತ ಕಂಡು ಆರನೇ ಸ್ಥಾನಕ್ಕೆ ಏರುವ ಮೂಲಕ ಅಗ್ರ 10 ರೊಳಗೆ ಮರಳಿದ್ದಾರೆ. ರಿಷಭ್ ಪಂತ್ 3 ಸ್ಥಾನ ಕುಸಿದು 9ನೇ ಶ್ರೇಯಾಂಕದಲ್ಲಿದ್ದಾರೆ. ರೋಹಿತ್ ಶರ್ಮಾ 5 ಸ್ಥಾನ ಕುಸಿದು 15ನೇ, 2 ಸ್ಥಾನ ಇಳಿದ ಶುಭ್ಮನ್ ಗಿಲ್ 16 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಜೋ ರೂಟ್ ನಂಬರ್ 1 ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಸ್ಟಾರ್ ಪ್ಲೇಯರ್ ರವೀಂದ್ರ ಜಡೇಜಾ ಅಗ್ರಸ್ಥಾನ ಅಬಾಧಿತವಾಗಿದ್ದರೆ, ಆರ್. ಅಶ್ವಿನ್ ಎರಡನೇ ಮತ್ತು ಅಕ್ಷರ್ ಪಟೇಲ್ ಏಳನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಡಬ್ಲ್ಯೂಟಿಸಿಯಲ್ಲಿ ಭಾರತ ನಂ.1: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪಟ್ಟಿಯಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದ್ದು 11 ಪಂದ್ಯಗಳಲ್ಲಿ ಶೇಕಡಾ 74.24% ರಷ್ಟು ಗೆಲುವಿನ ಪ್ರಮಾಣ ಹೊಂದಿ ನಂಬರ್ 1 ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಟೆಸ್ಟ್‌ನಲ್ಲಿ 62.50 ಪ್ರತಿಶತದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ತಡೋಬಾ ಹುಲಿ ಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿದ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ - Sachin Tendulkar Visit Tadoba