IND vs SA 2nd T20: ಟೀಂ ಇಂಡಿಯಾ 4 ಪಂದ್ಯಗಳ ಟಿ20 ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿ ಹರಿಣ ಪಡೆ ಮೇಲೆ ಜಯ ಸಾಧಿಸಿದೆ.
ಕಿಂಗ್ಸ್‌ಮೇಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿತು. ಬ್ಯಾಟಿಂಗ್ನಲ್ಲಿ ಸಂಜು ಸ್ಯಾಮ್ಸನ್ ಅಬ್ಬರಿಸಿ ಬಿರುಸಿನ ಶತಕ ಸಿಡಿಸಿದರೆ, ಬೌಲಿಂಗ್ನಲ್ಲಿ ಕನ್ನಡಿಗ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್ ಕಮಾಲ್ ಮಾಡಿದ್ದರು. ಈ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಹರಿಣಗಳ ವಿರುದ್ಧ 61 ರನ್‌ಗಳಿಂದ ಗೆಲುವು ಸಾಧಿಸಿತು.
ಭಾರತ ನೀಡಿದ್ದ 203 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯ ತಂಡ ಆರಂಭದಲ್ಲೇ ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ 17.5 ಓವರ್‌ಗಳಲ್ಲಿ 141 ರನ್‌ಗಳಿಗೆ ಸರ್ವಪತನ ಕಂಡಿತು. ವರುಣ್ ಚಕ್ರವರ್ತಿ ಮತ್ತು ಬಿಷ್ಣೋಯ್ ತಲಾ ಮೂರು ವಿಕೆಟ್ ಉರುಳಿಸಿದರು. ಅವೇಶ್ ಖಾನ್ ಇಬ್ಬರು ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರೆ, ಅರ್ಷದೀಪ್ ಖಾತೆಗೆ ಒಂದು ವಿಕೆಟ್ ಸೇರಿತು.
ಇದರೊಂದಿಗೆ ಟೀಂ ಇಂಡಿಯಾ ಡರ್ಬನ್‌ನಲ್ಲಿ ಸತತ 5ನೇ ಗೆಲುವು ಮತ್ತು ಈ ವರ್ಷದ ಸತತ 11ನೇ ಜಯ ದಾಖಲಿಸಿತು. ಈ ವರ್ಷದಲ್ಲಿ ಭಾರತ ಒಟ್ಟು 23 ಪಂದ್ಯಗಳನ್ನು ಆಡಿದ್ದು ಕೇವಲ ಒಂದರಲ್ಲಿ ಮಾತ್ರ ಸೋತಿದೆ. ಜುಲೈ 6ರಂದು ನಡೆದ ಜಿಂಬಾಬ್ವೆ ವಿರುದ್ಧ ಟಿ20 ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ನಂತರ ನಡೆದ ಪಂದ್ಯಗಳಲ್ಲಿ ತಂಡ ಸತತ ಗೆಲುವು ಸಾಧಿಸುತ್ತಾ ಬಂದಿದೆ. ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20ಗೂ ಮುನ್ನವೇ ಭಾರತಕ್ಕೆ ಟೆನ್ಶನ್ ಹೆಚ್ಚಾಗಿದೆ.