ಹೈದರಾಬಾದ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಭಾರತದ ಪಾಲಿಗೆ ಈ ಪಂದ್ಯ ಮಹತ್ವದ್ದು. ಇದರ ಜೊತೆಗೆ, ಸೆಮೀಸ್ ರೇಸ್ನಲ್ಲಿ ಉಳಿಯಬೇಕಾದರೆ ಮುಂದಿನ ಎಲ್ಲ 3 ಪಂದ್ಯಗಳನ್ನೂ ಗೆಲ್ಲುವುದು ಕೂಡಾ ಅನಿವಾರ್ಯವಾಗಿದೆ.
ಮತ್ತೊಂದೆಡೆ, ತನ್ನ ಮೊದಲ ಪಂದ್ಯದಲ್ಲೇ ಏಷ್ಯಾಕಪ್ ಚಾಂಪಿಯನ್ಸ್ ಶ್ರೀಲಂಕಾವನ್ನು 31 ರನ್‌ಗಳಿಂದ ಮಣಿಸಿರುವ ಪಾಕ್, ಈ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಭಾರತವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುತ್ತಿದ್ದರೆ, ಫಾತಿಮಾ ಸನಾ ಪಾಕ್ ನಾಯಕತ್ವ ವಹಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.
ಹೇಗಿದೆ ಪೈಪೋಟಿ?: ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 15 ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ 12 ಪಂದ್ಯಗಳಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದರೆ, ಪಾಕಿಸ್ತಾನ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ.
ಪಿಚ್ ಹೇಗಿದೆ?:ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೂ ಒಟ್ಟು 99 ಟಿ20 ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 46 ಬಾರಿ ಗೆಲುವು ಸಾಧಿಸಿದರೆ, ಚೇಸಿಂಗ್ ತಂಡಗಳು 52 ಬಾರಿ ಜಯಿಸಿವೆ. ಮೊದಲ ಇನ್ನಿಂಗ್ಸ್ ಸ್ಕೋರ್ 141 ರನ್ ಆಗಿದ್ದು, ಎರಡನೇ ಇನ್ನಿಂಗ್ಸ್ ಸ್ಕೋರ್ 124 ಆಗಿದೆ. ಈ ಮೈದಾನದಲ್ಲಿ ದಾಖಲದಾದ ಗರಿಷ್ಠ ಸ್ಕೋರ್ 212 ಆಗಿದ್ದು, 55 ಲೋ ಸ್ಕೋರ್ ಆಗಿದೆ.