ಬೆಳಗಾವಿ: ಬೆಳಗಾವಿಯಲ್ಲಿ ಇಂದು ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಮಹಾತ್ಮ ಗಾಂಧೀಜಿಯ ವೇಷ ಧರಿಸಿ ಬಂದಿದ್ದ ಮಕ್ಕಳು ಎಲ್ಲರ ಗಮನ ಸೆಳೆದರು. ನಾವೂ ಗಾಂಧಿ ಎಂಬ ಸಂದೇಶವನ್ನು ಹೊತ್ತು ಬಂದಿದ್ದ ಅವರು ಜನರಲ್ಲಿ ಅವರ ವಿಚಾರಧಾರೆಗಳನ್ನು ಬಿತ್ತಿದರು.
ಬೋಳಿಸಿದ ತಲೆ, ದೋತರ (ಪಂಚೆ) ಉಟ್ಟು, ಕೈಯಲ್ಲಿ ಕೋಲು ಹಿಡಿದು, ಜನಿವಾರ ಧರಿಸಿ, ಮುಖಕ್ಕೆ ಬಣ್ಣ ಹಚ್ಚಿಕೊಂಡಿದ್ದ ಈ ಮಕ್ಕಳು ಗಾಂಧೀಜಿ ದರ್ಶನ ಮಾಡಿಸಿದರು. ಹುಬ್ಬಳ್ಳಿ ತಾಲ್ಲೂಕಿನ ದೇವರಗುಡಿಹಾಳ ಮತ್ತು ಈಶ್ವರ ನಗರದ 101 ಹುಡುಗರು ಕಾಂಗ್ರೆಸ್ ಸಮಾವೇಶದಲ್ಲಿ ಮಹಾತ್ಮನ ಕಳೆ ತಂದರು. ಥೇಟ್ ಗಾಂಧಿ ಅವರಂತೆ ಮಕ್ಕಳು ಕಾಣುತ್ತಿದ್ದರು. 3 ರಿಂದ 14 ವರ್ಷದೊಳಗಿನ ಮಕ್ಕಳ ಈ ಅಭಿಮಾನಕ್ಕೆ ಎಲ್ಲರೂ ಫಿದಾ ಆದರು. ಈ ಗಾಂಧಿ ಹುಡುಗರ ಜೊತೆಗೆ ಸಮಾವೇಶಕ್ಕೆ ಬಂದಿದ್ದ ಜನರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕೆಲ ಪೊಲೀಸ್ ಅಧಿಕಾರಿಗಳು ಮಕ್ಕಳ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು ವಿಶೇಷ.
ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸೇವಾದಳದ ಸ್ವಯಂ ಸೇವಕಿ ತೇಜಸ್ವಿನಿ ಬೆಂಗಳೂರು, "ಮಕ್ಕಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದರು. ಅದೆಷ್ಟೋ ಪಾಲಕರು ಆಸಕ್ತಿಯಿಂದ ಕಳಿಸಿಕೊಟ್ಟರು. ಒಂದಿಷ್ಟು ಪಾಲಕರು ತಮ್ಮ ಮಕ್ಕಳು ತಲೆ ಬೋಳಿಸಲು ಒಪ್ಪದಿದ್ದಾಗ, ಆ ಮಕ್ಕಳು ಕಾಡಿ-ಬೇಡಿ, ಅತ್ತು-ಕರೆದು ಗಾಂಧೀಜಿ ವೇಷ ಧರಿಸಿದರು. ಇದು ಗಾಂಧೀಜಿ ಅವರ ಬಗ್ಗೆ ಅವರಿಗೆ ಎಷ್ಟು ಅಭಿಮಾನವಿದೆ ಎಂಬುದನ್ನು ತೋರಿಸುತ್ತದೆ. 101 ಮಕ್ಕಳು ಮುಂದೆ ಸಾವಿರಾರು ಜನರಿಗೆ ಪ್ರೇರಣೆಯಾಗಲಿ. ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸು ನನಸು ಮಾಡುವುದೇ ನಮ್ಮ ಗುರಿ" ಎಂದರು.
"ಗಾಂಧೀಜಿ ವೇಷ ಧರಿಸಿದ್ದಕ್ಕೆ ನಮಗೆ ತುಂಬಾ ಸಂತೋಷವಿದೆ. ಗಾಂಧಿ ಅಜ್ಜ ಕಂಡಿದ್ದ ರಾಮರಾಜ್ಯದ ಕನಸು ಸಾಕಾರಗೊಳಿಸುವ ದೃಢ ವಿಶ್ವಾಸ ನಮ್ಮಲ್ಲಿದೆ. ಹೇಗೆ ಗಾಂಧೀಜಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರೋ, ಅದೇ ರೀತಿ ನಾವೂ ದೇಶವನ್ನು ಮತ್ತಷ್ಟು ಬಲಿಷ್ಠ ಪಡಿಸಲು ಶ್ರಮಿಸುತ್ತೇವೆ" ಎನ್ನುವುದು ಗಾಂಧಿ ವೇಷಧಾರಿ ಸುನೀಲ್ ಗಾರ್ಗೆ ಮಾತು.
ರೋಹಿತ್ ಮಡಿವಾಳ ಮಾತನಾಡಿ, "ದ್ವೇಷ ಬಿಡು-ಪ್ರೀತಿ ಮಾಡು ಎಂದು ಗಾಂಧಿ ಅಜ್ಜ ಹೇಳಿದ್ದರು. ಆ ನಿಟ್ಟಿನಲ್ಲಿ ನಾವು ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ. ಇನ್ನು ತಲೆ ಬೋಳಿಸಿಕೊಳ್ಳುವಾಗ ನನಗೆ ಯಾವುದೇ ಹಿಂಜರಿಕೆ ಆಗಲಿಲ್ಲ. ಯಾಕೆಂದರೆ ದೇಶಕ್ಕಾಗಿ ಬಲಿದಾನ ಮಾಡಿದ ಗಾಂಧೀಜಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ" ಎಂದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಿದ ಖರ್ಗೆ: ಬಿಜೆಪಿ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ