ಪ್ರಯಾಗ್ರಾಜ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಮಹಾಕುಂಭದಲ್ಲಿ ವಿಶೇಷ ಕ್ಯಾಬಿನೆಟ್ ಸಭೆ ನಡೆಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್, ಇಂದು ಮಧ್ಯಾಹ್ನ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಇದಾದ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರೆ ಸಚಿವರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಈ ಸಂಬಂಧ ಸಿದ್ಧತೆಗಳ ಪರಿಶೀಲನೆ ಮಾಡಲಾಗಿದ್ದು, ಇಲ್ಲಿನ ಪ್ರತಿಯೊಬ್ಬರಿಗೂ ಉತ್ತಮ ಸೌಕರ್ಯವನ್ನು ನೀಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ಉತ್ತರ ಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ ಸಚಿವ ದಾನಿಶ್ ಅಜಾದ್ ಅನ್ಸಾರಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಉತ್ತರ ಪ್ರದೇಶ ಅಭಿವೃದ್ಧಿ ಹೊಸ ಮಟ್ಟ ತಲುಪಲಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಇಂದು ಪ್ರಯಾಗ್ರಾಜ್ನಲ್ಲಿ ಸಚಿವ ಸಂಪುಟ ಸಭೆ ಇದೆ. ಹೊಸ ಮಟ್ಟಕ್ಕೆ ನಾವು ಉತ್ತರ ಪ್ರದೇಶ ಅಭಿವೃದ್ಧಿಯನ್ನು ಕೊಂಡೊಯ್ಯಲಿದ್ದೇವೆ. ಉತ್ತರ ಪ್ರದೇಶ ಅಭಿವೃದ್ಧಿಗಾಗಿ, ಯುವಜನರಿಗೆ, ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ವಿಚಾರದಲ್ಲಿ ಯೋಗಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಉತ್ತರ ಪ್ರದೇಶವನ್ನು ಉತ್ತಮ್ ಪ್ರದೇಶ ಆಗಿ ರೂಪಿಸುತ್ತೇವೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಉತ್ತರಪ್ರದೇಶದ ಎಲ್ಲಾ 54 ಸಚಿವರನ್ನು ಸಚಿವ ಸಂಪುಟ ಸಭೆಗೆ ಆಹ್ವಾನಿಸಲಾಗಿದ್ದು, ಸಭೆಯಲ್ಲಿ ಹಲವು ಪ್ರಮುಖ ಪ್ರಸ್ತಾವ ಮತ್ತು ಯೋಜನೆಗೆ ಸಮ್ಮತಿ ದೊರೆಯುವ ನಿರೀಕ್ಷೆ ಇದೆ.
ಇದೊಂದು ಐತಿಹಾಸಿಕ ದಿನವಾಗಿದೆ. 500 ವರ್ಷಗಳ ಹೋರಾಟ ಮತ್ತು ತ್ಯಾಗದ ಬಳಿಕ ಇದೇ ದಿನ ಕಳೆದ ವರ್ಷ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಾಗಿತ್ತು. ಇಂದು ನಾವು ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭದಲ್ಲಿ ಭಾಗಿಯಾಗುತ್ತಿದ್ದೇವೆ. ಇಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಜನರ ಕಲ್ಯಾಣ ಕುರಿತು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದು, ಇದಾದ ಬಳಿಕ ಸಂಜೆ ಎಲ್ಲಾ ಸಚಿವರು ಸಂಗಮದಲ್ಲಿ ಸ್ನಾನ ಮಾಡಲಿದ್ದೇವೆ ಎಂದರು.
ಸಿಎಂ ಯೋಗಿ ಸರ್ಕಾರ ಇದೇ ಮೊದಲ ಬಾರಿಗೆ ಸಂಗಮದಲ್ಲಿ ಸಂಪುಟ ಸಭೆ ನಡೆಸುತ್ತಿಲ್ಲ. 2019ರಲ್ಲಿ ಕೂಡ ಕುಂಭಮೇಳ ನಡೆದಾಗ ಎಲ್ಲಾ ಸಚಿವರು ಅಖಾಡ ಪರಿಷದ್ ಅಧ್ಯಕ್ಷ ನರೇಂದ್ರ ಗಿರಿ ಮತ್ತು ಇತರೆ ಸಂತರೊಂದಿಗೆ ಪವಿತ್ರ ಸ್ನಾನ ನಡೆಸಿದ್ದರು. (ಎಎನ್ಐ)
ಇದನ್ನೂ ಓದಿ: ಅಫ್ಜಲ್ಗಂಜ್-ಬೀದರ್ ಗುಂಡಿನ ದಾಳಿ ಪ್ರಕರಣ; ವಿವಿಧ ರಾಜ್ಯಗಳಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರ ತಲಾಶ್