ಬೆಂಗಳೂರು:ಭಾರತ-ನ್ಯೂಜಿಲ್ಯಾಂಡ್ ನಡುವಿನ ಮೊದಲ ಪಂದ್ಯದ ಮೊದಲ ದಿನ ಮಳೆರಾಯನಿಗೆ ಅರ್ಪಿತವಾಗಿದೆ. ಸತತವಾಗಿ ಮಳೆ ಬೀಳುತ್ತಿರುವ ಕಾರಣ ಮೊದಲ ದಿನದಾಟವನ್ನು ಟಾಸ್ ಇಲ್ಲದೇ ಮುಗಿಸಲಾಯಿತು. ಮೈದಾನದಲ್ಲಿ ನೀರು ನಿಂತಿದ್ದರಿಂದ ಮಧ್ಯಾಹ್ನ 2.30ಕ್ಕೆ ಅಂಪೈರ್ಗಳು ದಿನದಾಟವನ್ನು ರದ್ದು ಮಾಡಿದರು.
ಕಳೆದ ಎರಡು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಜಡಿಮಳೆ ಬೆಂಗಳೂರನ್ನು ಹೈರಾಣಾಗಿಸಿದೆ. ಎರಡೂವರೆ ವರ್ಷಗಳ ನಂತರ ಟೆಸ್ಟ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಉಭಯ ತಂಡಗಳ ನಡುವಿನ ಹಣಾಹಣಿಗೆ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆದರೆ, ವರುಣರಾಯ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಎರಡೂ ತಂಡಗಳು ಆಟಗಾರರು ಹೆಚ್ಚು ಸಮಯವನ್ನು ತಮ್ಮ ಡ್ರೆಸ್ಸಿಂಗ್ ರೂಮಿನಲ್ಲೇ ಕಳೆದರು. ನಾಯಕರಾದ ರೋಹಿತ್ ಶರ್ಮಾ, ಟಾಮ್ ಲ್ಯಾಥಮ್ ಆಗಾಗ್ಗೆ ಹೊರಬಂದು ಮೈದಾನವನ್ನು ವೀಕ್ಷಿಸುತ್ತಿದ್ದರು. ಅಂಪೈರ್ಗಳು ಕೂಡ ಪದೇ ಪದೆ ಮೈದಾನಕ್ಕಿಳಿದು ವೀಕ್ಷಿಸುತ್ತಿದ್ದರು. ಆದರೆ, ಯಾವುದೇ ಹಂತದಲ್ಲಿಯೂ ಮಳೆ ನಿಲ್ಲದ ಕಾರಣ, ಪಿಚ್ ಮೇಲೆ ಹಾಕಿರುವ ಹೊದಿಕೆಯನ್ನು ತೆಗೆಯಲಾಗಲಿಲ್ಲ.