Virat kohli sam konstas Incident: ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸಧ್ಯ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು ಮೇಲ್ಬೋರ್ನ್ನ ಎಮ್ಸಿಎ ಮೈದಾನದಲ್ಲಿ ಇಂದಿನಿಂದ ನಾಲ್ಕನೇ ಪಂದ್ಯ (ಬಾಕ್ಸಿಂಗ್ ಡೇ ಟೆಸ್ಟ್) ಆರಂಭವಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ ಮೊದಲ ದಿನದಾಟಕ್ಕೆ ಉತ್ತಮ ಸ್ಕೋರ್ ಕಲೆಹಾಕಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಬಂದ ಸ್ಯಾಮ್ ಕಾನ್ಸ್ಟಾಸ್ ಮತ್ತು ಉಸ್ಮಾನ್ ಖವಾಜ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಅದರಲ್ಲೂ ಚೊಚ್ಚಲ ಪಂದ್ಯದಲ್ಲೇ ಕಾನ್ಸ್ಟಾಸ್ ಭಾರತೀಯ ಬೌಲರ್ಗಳನ್ನು ಕಾಡಿ ವೇಗವಾಗಿ ಅರ್ಧಶತಕ ಸಿಡಿಸಿದರು. ಕಾನ್ಸ್ಟಾಸ್ ತಮ್ಮ ಇನ್ನಿಂಗ್ಸ್ನಲ್ಲಿ 65 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 60 ರನ್ ಚಚ್ಚಿದರು. ಆದ್ರೆ ಜಡೇಜಾ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಮತ್ತೊಂದೆಡೆ ಉಸ್ಮಾನ್ ಖವಾಜ (57), ಮಾರ್ನಸ್ ಲಾಬುಶೇನೆ (72) ಅರ್ಧಶತಕ ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಳೆದ ಮೂರು ಪಂದ್ಯಗಳಲ್ಲಿ ಭಾರತವನ್ನು ಕಾಡಿದ್ದ ಟ್ರಾವಿಸ್ ಹೆಡ್ ಇಂದು ಖಾತೆ ತೆರೆಯದೇ ಡಕ್ಔಟ್ ಆಗಿ ಪೆವಿಲಿಯನ್ ಸೇರಿದರು. ಸ್ಟೀವ್ ಸ್ಮಿತ್ 68 ರನ್ ಗಳಿಸೆ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟ ಮುಕ್ತಾಯದ ವೇಳೆಗೆ ಕಾಂಗರೂ ಪಡೆ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿದೆ.