ಕೌಲಾಲಂಪುರ್ (ಸಿಂಗಾಪುರ): 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ 2025ರಲ್ಲಿ ಪುರುಷರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಆಯೋಜಿಸಲಿದೆ. ಅದೇ ರೀತಿಯಾಗಿ 2027ರಲ್ಲಿ ಏಕದಿನ ವಿಶ್ವಕಪ್ ಸಂದರ್ಭದಲ್ಲೇ ಬಾಂಗ್ಲಾದೇಶವು ಏಕದಿನ ಏಷ್ಯಾ ಕಪ್ ಟೂರ್ನಿಯ ಆತಿಥ್ಯ ವಹಿಸಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.
ಏಷ್ಯಾ ಕಪ್ ಯಾವಾಗಲೂ ಜಾಗತಿಕ ಟೂರ್ನಿಗಾಗಿ ಪೂರ್ವಾಭ್ಯಾಸ ಮತ್ತು ವಿಶ್ವಕಪ್ ಸ್ವರೂಪದಲ್ಲಿ ಆಡಲಾಗುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಯೋಜಿಸಿದ್ದ 2023ರ ಏಷ್ಯಾ ಕಪ್ ಆವೃತ್ತಿಯನ್ನು 'ಹೈಬ್ರಿಡ್ ಮಾದರಿ'ಯಲ್ಲಿ ನಡೆಸಲಾಗಿತ್ತು. ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.