ಹುಬ್ಬಳ್ಳಿ: "ಗರ್ಭಿಣಿ, ಬಾಣಂತಿಯರಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮತ್ತು ಸಾಗಾಟ ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ 18 ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ಬಂಧಿಸಲಾಗಿದೆ. ಜೊತೆಗೆ ವಾಹನ ಸಮೇತ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ" ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಬೊಲೆರೋ ವಾಹನ ಮಾಲೀಕ ಮಂಜುನಾಥ ದೇಸಾಯಿ, ಚಾಲಕ ಲಕಮಾಪೂರದ ಬಸವರಾಜ ಭದ್ರಶೆಟ್ಟಿ, ಗೋದಾಮು ಮಾಲೀಕ ಹಳೇ ಹುಬ್ಬಳ್ಳಿ ನೇಕಾರನಗರದ ಮೊಹ್ಮದಗೌಸ್ ಖಲೀಪಾ, ಬಾಡಿಗೆದಾರ ಗೌತಮಸಿಂಗ ಠಾಕೂರ್, ಹುಬ್ಬಳ್ಳಿ ತಾಲೂಕಿನ ಕುರಡಿಕೇರಿಯ ಮಂಜುನಾಥ ಮಾದರ, ಕುಂದಗೋಳ ತಾಲೂಕಿನ ಯರಗುಪ್ಪಿಯ ಫಕ್ಕಿರೇಶ ಹಲಗಿ, ಕೃಷ್ಣಾ ಮಾದರ, ರವಿ ಹರಿಜನ ಸೇರಿದಂತೆ 18 ಅಂಗನವಾಡಿ ಕಾರ್ಯಕರ್ತೆಯರನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.
4 ಲಕ್ಷ ಮೌಲ್ಯದ ಆಹಾರ ಪದಾರ್ಥ ವಶ: "ಬಂಧಿತರಿಂದ ಅಂದಾಜು 4 ಲಕ್ಷ ರೂ. ಮೌಲ್ಯದ ಒಟ್ಟು 329 ಚೀಲಗಳಲಿದ್ದ 8 ಟನ್ 84 ಕೆ.ಜಿ. ಆಹಾರ ಪದಾರ್ಥಗಳಾದ ಗೋಧಿ ರವಾ, ಮಿಲೇಟ್ ಲಡ್ಡು, ಅಕ್ಕಿ, ಹಾಲಿನ ಪುಡಿ, ಸಾಂಬಾರ್ ಮಸಾಲಾ ಪುಡಿ, ಬೆಲ್ಲ, ಉಪ್ಪಿಟ್ಟು ಮಸಾಲಾ, ಸಕ್ಕರೆ, ಕಡಲೆಕಾಳು ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ವಶ ಪಡಿಸಿಕೊಳ್ಳಲಾಗಿದೆ" ಎಂದು ಕಮಿಷನರ್ ಮಾಹಿತಿ ನೀಡಿದರು.
"ಖಚಿತ ಮಾಹಿತಿ ಮೇರೆಗೆ ಭಾನುವಾರ ಹಳೆ ಗಬ್ಬೂರು ಹೊರ ವಲಯದಲ್ಲಿರುವ ಗೋದಾಮಿನ ಮೇಲೆ ದಾಳಿ ಮಾಡಿದಾಗ, ಅಲ್ಲಿ ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸುವ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಕಸಬಾಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು" ಎಂದು ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
"ದೂರಿನನ್ವಯ 18 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 26 ಜನರನ್ನು ಬಂಧಿಸಲಾಗಿದೆ. ಪ್ರಕರಣದ ಕೂಲಂಕಷ ತನಿಖೆ ನಡೆಯುತ್ತಿದ್ದು, ಇದರಲ್ಲಿ ಇನ್ನೂ ಯಾರ‍್ಯಾರು ಭಾಗಿಯಾಗಿದ್ದಾರೆ. ಕಾಳಸಂತೆಯಲ್ಲಿ ಇವನ್ನು ಹೇಗೆ ಮಾರಾಟ ಮಾಡುತ್ತಿದ್ದರು. ಇದರ ಜಾಲ ಇನ್ನೂ ಎಷ್ಟು ಹಬ್ಬಿದೆ ಎಂಬುದರ ಕುರಿತು ಆಳವಾದ ತನಿಖೆಗೆ ನಡೆಸುವಂತೆ ಸೂಚಿಸಿದ್ದೇನೆ. ಇದೊಂದು ಗಂಭೀರವಾದ ಸಂಘಟಿತ ಅಪರಾಧ ಪ್ರಕರಣವಾಗಿದ್ದು, ನಿಷ್ಪಕ್ಷಪಾತ ತನಿಖೆಗೊಳಪಡಿಸಲಾಗುವುದು" ಎಂದು ಅವರು ತಿಳಿಸಿದರು.
ಇದನ್ನೂ ಓದಿ: 2 ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಬಾಕಿ, ಇನ್ಮೇಲೆ ಪ್ರತಿ ತಿಂಗಳು ಹಾಕಲಾಗುವುದು: ಕೆ.ಹೆಚ್. ಮುನಿಯಪ್ಪ
ಇದನ್ನೂ ಓದಿ: ಸರ್ಕಾರಿ, ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ಮಾತ್ರ ವಿತರಿಸಲು ಆದೇಶ