ನವದೆಹಲಿ:ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು 1 ಪಂದ್ಯ ಬಾಕಿ ಇರುವಾಗಲೇ ವಶಪಡಿಸಿಕೊಂಡ ಭಾರತ 2023 - 25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಮಾಡಿಕೊಂಡಿತು. ಡಬ್ಲ್ಯೂಟಿಸಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಐದನೇ ಗೆಲುವು ದಾಖಲಿಸಿ, 64.58 ಪ್ರತಿಶತದೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ..
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿ ಬಿಡುಗಡೆ ಮಾಡಿದ್ದು, ಐದು ಗೆಲುವು, 2 ಸೋಲು, 1 ಡ್ರಾ ಸಾಧಿಸಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 3-1 ರಲ್ಲಿ ತನ್ನದಾಗಿಸಿಕೊಂಡಿದ್ದು, ಇನ್ನೊಂದು ಪಂದ್ಯ ಬಾಕಿ ಇದೆ. ಧರ್ಮಶಾಲಾದಲ್ಲಿ ನಡೆಯುವ ಐದನೇ ಮತ್ತು ಕೊನೆಯ ಟೆಸ್ಟ್ ಅನ್ನು ಗೆದ್ದಲ್ಲಿ ಗೆಲುವಿನ ಸರಾಸರಿ ಮತ್ತಷ್ಟು ಉತ್ತಮವಾಗಲಿದೆ. ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವ ಅವಕಾಶವಿದೆ.
ವೆಸ್ಟ್ಇಂಡೀಸ್ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ 1 ಗೆದ್ದು ,1 ಡ್ರಾ ಸಾಧಿಸಲಾಗಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ತಲಾ 1 ಸೋಲು ಗೆಲುವಿನ ಮೂಲಕ ಡ್ರಾ ಮಾಡಿಕೊಂಡಿತ್ತು. ಇದೀಗ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 1 ರಲ್ಲಿ ಸೋತು, ಮೂರರಲ್ಲಿ ಗೆದ್ದಿದೆ. ಇದರಿಂದ ಗೆಲುವಿನ ಶೇಕಡಾವಾರು ಪ್ರಮಾಣ 64.58ಕ್ಕೆ ಏರಿದೆ.