ಬ್ರಿಸ್ಬೇನ್, ಆಸ್ಟ್ರೇಲಿಯಾ:ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿದ್ದು, ಭಾರತ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಆದರೆ ಪಂದ್ಯ ಆರಂಭಗೊಂಡು ಕೆಲವೇ ಕ್ಷಣಗಳಲ್ಲಿ ವರುಣನ ಆರ್ಭಟ ಶುರುವಾಗಿತ್ತು. ಸದ್ಯ ಮಳೆ ನಿಂತಿದ್ದು, ಮತ್ತೆ ಆಟ ಆರಂಭಗೊಂಡಿದೆ. ಸದ್ಯ ಆಸ್ಟ್ರೇಲಿಯಾ 8 ಓವರ್ಗಳಿಗೆ 24 ರನ್ಗಳಿಸಿದೆ. ಆರಂಭಿಕರಾದ ಉಸ್ಮಾನ್ ಖವಾಜಾ (17) ಮತ್ತು ನಾಥನ್ ಮೆಕ್‌ಸ್ವೀನಿ (2) ಬ್ಯಾಟಿಂಗ್ ಆರಂಭಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ರಸ್ತುತ 1-1 ರಲ್ಲಿ ಸಮಬಲವಾಗಿದ್ದು, ಈ ಟೆಸ್ಟ್ ನಿರ್ಣಾಯಕವಾಗಲಿದೆ.
ಭಾರತವು ಒಂದೆರಡು ಬದಲಾವಣೆಗಳನ್ನು ಮಾಡಿದ್ದು, ಹರ್ಷಿತ್ ರಾಣಾ ಮತ್ತು ಆರ್ ಅಶ್ವಿನ್ ಬದಲಾಗಿ ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆಸ್ಟ್ರೇಲಿಯ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಜೋಶ್ ಹೇಜಲ್‌ವುಡ್ ತಂಡಕ್ಕೆ ಮರಳಿದ್ದಾರೆ. ಸ್ವಲ್ಪ ಮೋಡ ಕವಿದ ವಾತಾವರಣವಿದೆ. ಬರುಬರುತ್ತ ಬ್ಯಾಟಿಂಗ್ಗೆ ಉತ್ತಮ ವಾತಾವರಣ ಇದೆ ಎಂದು ಟಾಸ್ ಗೆದ್ದ ರೋಹಿತ್ ಶರ್ಮಾ ಹೇಳಿದ್ದಾರೆ. ಇಲ್ಲಿ ನಾವು ಉತ್ತಮ ಆಟ ಆಡುತ್ತೇವೆ. ಇಲ್ಲಿ ಹೇಗೆ ಆಡಬೇಕು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.