Ind vs Aus, 3rd Test: ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಶನಿವಾರ (ನಾಳೆ)ಯಿಂದ ಆರಂಭವಾಗಲಿದೆ. ಉಭಯ ತಂಡಗಳು ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
ಟೆಸ್ಟ್ ಸರಣಿಯ ಎರಡು ಪಂದ್ಯಗಳು ಪೂರ್ಣಗೊಂಡಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸಮಬಲ ಸಾಧಿಸಿವೆ. ಇದೀಗ ಮೂರನೇ ಟೆಸ್ಟ್ ಪಂದ್ಯ ಭಾರೀ ರೋಚಕತೆಯಿಂದ ಕೂಡಿರಲಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಲು ಉಭಯ ತಂಡಗಳಿಗೆ ಗೆಲುವು ಅನಿವಾರ್ಯ. ಇದಕ್ಕಾಗಿ ಆಟಗಾರರು ನಿರಂತರ ಅಭ್ಯಾಸ ನಡೆಸುತ್ತಿದ್ದಾರೆ.
ಅದರಲ್ಲೂ ಟೀಂ ಇಂಡಿಯಾ ಪಾಲಿಗೆ ಮೂರನೇ ಟೆಸ್ಟ್ ಮಹತ್ವದ್ದು. ವಿಶ್ವ ಟೆಸ್ಟ್ ಚಾಂಪಿಯನ್ಸ್ ಫೈನಲ್‌ಗೆ ನೇರವಾಗಿ ಪ್ರವೇಶ ಪಡೆಯಬೇಕಾದರೆ ಉಳಿದಿರುವ ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಾಗಿದೆ. ಏತನ್ಮಧ್ಯೆ, ಮೂರನೇ ಟೆಸ್ಟ್ನಲ್ಲಿ ಎಲ್ಲರ ಕಣ್ಣು ರಿಷಭ್ ಪಂತ್ ಮೇಲೆ ನೆಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಆಟಗಾರನಾಗಿರುವ ಪಂತ್ ಒಮ್ಮೆ ಅಬ್ಬರಿಸಲು ನಿಂತರೆ ಪಂದ್ಯದ ಗತಿ ಬದಲಾಯಿಸಬಲ್ಲ ಆಟಗಾರನಾಗಿದ್ದಾರೆ.
ಹೀಗೆ ಹೇಳಲು ಕಾರಣವೂ ಇದೆ. ಗಬ್ಬಾ ಮೈದಾನದಲ್ಲಿ ಭಾರತ ಈವರೆಗೆ 7 ಟೆಸ್ಟ್ ಪಂದ್ಯಗಳನ್ನಾಡಿದ್ದು ಅದರಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಬಾರಿಗೆ ಗಬ್ಬಾದಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಈ ಪಂದ್ಯದ ಗೆಲುವಿನಲ್ಲಿ ಶುಭಮನ್ ಗಿಲ್ (91 ರನ್) ಮತ್ತು ರಿಷಭ್ ಪಂತ್ (89*) ಪ್ರಮುಖ ಪಾತ್ರವಹಿಸಿದ್ದರು.
ಅದರಲ್ಲೂ ಕೊನೆಯಲ್ಲಿ ಪಂತ್ ತಂಡದ ಕೈ ಹಿಡಿದಿದ್ದರು. ಗೆಲುವಿನ ಭರವಸೆ ಕಳೆದುಕೊಂಡಿದ್ದ ಭಾರತವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲೂ ಭಾರತ ಗೆಲ್ಲಬೇಕಾದರೆ ಪಂತ್ ಮತ್ತು ಗಿಲ್ ಮತ್ತೊಮ್ಮೆ ಅಬ್ಬರಿಸಬೇಕಿದೆ.
ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಇಬ್ಬರೂ ಫಾರ್ಮ್ಗೆ ಮರಳಬೇಕಿದೆ.
3ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ: 3ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಒಂದು ದಿನ ಮುಂಚಿತವಾಗಿಯೇ ತಂಡವನ್ನು ಪ್ರಕಟಿಸಿದೆ. ಗಾಯಕ್ಕೆ ತುತ್ತಾಗಿ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದ ಹ್ಯಾಜಲ್‌ವುಡ್ ಇದೀಗ ತಂಡಕ್ಕೆ ಮರಳಿದ್ದಾರೆ.
ಆಸ್ಟ್ರೇಲಿಯಾ: ನಾಥನ್ ಮೆಕ್‌ಸ್ವೀನಿ, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.
ಇದನ್ನೂ ಓದಿ: ಅಚ್ಚರಿ!: ನಾಯಕ ರೋಹಿತ್ ಶರ್ಮಾಗೇ ತಂಡದಲಿಲ್ಲ ಸ್ಥಾನ; ಹೀಗಿದೆ ಅಂತಿಮ ತಂಡ!