ಹೈದರಾಬಾದ್: ಸದ್ಯ ಭಾರತ-ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದೆ.
ಈ ಸೋಲಿನ ಬೆನ್ನಲ್ಲೇ ಭಾರತದ ಹಿರಿಯ ಆಟಗಾರರ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿವೆ. ಅದರಲ್ಲೂ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತುಗಳು ಕೇಳಿಬಂದಿದ್ದವು.
ಎರಡನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾಗಿ ಹೇಳಿದ್ದ ರೋಹಿತ್ ಶರ್ಮಾ, ಸಾಮಾನ್ಯ ಆಟಗಾರನಂತೆ ಕಾಣಿಸಿಕೊಂಡಿದ್ದರು. ಎರಡೂ ಇನ್ನಿಂಗ್ಸ್‌ನಲ್ಲಿ ತಂಡ ಸಂಕಷ್ಟದಲ್ಲಿರುವಾಗ ರೋಹಿತ್ ಬ್ಯಾಟಿಂಗ್‌ಗೆ ಬಂದರೂ ಕ್ರೀಸ್ನಲ್ಲಿ ನಿಂತು ತಂಡಕ್ಕೆ ಆಸರೆಯಾಗಲಿಲ್ಲ. ಎರಡೂ ಇನ್ನಿಂಗ್ಸ್‌ನಲ್ಲಿ ಕೇವಲ 3 ಮತ್ತು 6 ರನ್ಗಳಿಸಿ ಔಟಾಗಿದ್ದರು.
ಬ್ಯಾಟಿಂಗ್ ಜೊತೆಗೆ ನಾಯಕತ್ವದ ಬಗ್ಗೆಯೂ ಟೀಕೆಗಳು ಬಂದಿದ್ದವು. ರೋಹಿತ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಬುಮ್ರಾ ನಾಯಕತ್ವ ವಹಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ ಅಡಿಲೇಡ್ನಲ್ಲಿ ರೋಹಿತ್ ಜವಾಬ್ದಾರಿ ವಹಿಸಿಕೊಂಡರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಹಾಗಾಗಿ, ಮುಂದಿನ ಪಂದ್ಯಕ್ಕೆ ಬುಮ್ರಾ ನಾಯಕತ್ವ ವಹಿಸಿಕೊಳ್ಳಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದರು. ಇದರ ನಡುವೆಯೇ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡ್ಯಾರಿಲ್ ಕುಲ್ಲಿನನ್ ಕೂಡ ರೋಹಿತ್ ಶರ್ಮಾ ಅವರನ್ನು ಕಟುವಾಗಿ ಟೀಕಿಸಿದ್ದಾರೆ.
"ರೋಹಿತ್ ಮತ್ತು ವಿರಾಟ್ ಅವರ ದೈಹಿಕ ಸ್ಥಿತಿಯಲ್ಲಿ ಭಾರೀ ವ್ಯತ್ಯಾಸವಿದೆ. ರೋಹಿತ್ ಅಧಿಕ ತೂಕ ಹೊಂದಿದ್ದು ಇವರು ದೀರ್ಘಾವಧಿಯ ಕ್ರಿಕೆಟಿಗನಲ್ಲ. ಅಲ್ಲದೇ ನಾಲ್ಕು ಅಥವಾ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವ ಸ್ಥಿತಿಯಲ್ಲಿ ರೋಹಿತ್ ಇಲ್ಲ. ಇವರು ಫ್ಲಾಟ್ ವಿಕೆಟ್‌ಗಳಲ್ಲಿ ಮಾತ್ರ ಆಡಬಲ್ಲರು. ಬೌನ್ಸ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಿಲ್ಲ" ಎಂದು ಡ್ಯಾರಿಲ್ ಕಲ್ಲಿನನ್ ಹೇಳಿರುವುದಾಗಿ ಇನ್ಸೈಡ್ಸ್ಪೋರ್ಟ್ ವರದಿ ಮಾಡಿದೆ.
ರೋಹಿತ್ ಶರ್ಮಾ ಕಳಪೆ ಫಾರ್ಮ್: ಟೆಸ್ಟ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಶತಕ ಬಾರಿಸಿ 10 ತಿಂಗಳು ಕಳೆದಿವೆ. ಕೊನೆಯ 12 ಟೆಸ್ಟ್ ಇನ್ನಿಂಗ್ಸ್‌ನಲ್ಲೂ ರೋಹಿತ್ 11.83 ಸರಾಸರಿಯಲ್ಲಿ ಕೇವಲ 142 ರನ್ ಮಾತ್ರ ಗಳಿಸಿದ್ದಾರೆ.
36ನೇ ಸ್ಥಾನಕ್ಕೆ ಕುಸಿದ ರೋಹಿತ್ ಶರ್ಮಾ: ICC ಇತ್ತೀಚಿನ ಟೆಸ್ಟ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಈ ಶ್ರೇಯಾಂಕದಲ್ಲಿ ರೋಹಿತ್ ಶರ್ಮಾ ಟಾಪ್ 30ರಲ್ಲೂ ಇಲ್ಲ. ಆರು ಸ್ಥಾನ ಕುಸಿದು 31ನೇ ಸ್ಥಾನ ತಲುಪಿದ್ದಾರೆ. ಆರು ವರ್ಷಗಳ ನಂತರ ಮೊದಲ ಬಾರಿಗೆ ಹಿಟ್‌ಮ್ಯಾನ್ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ 30ರೊಳಗೆ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ: ಅಚ್ಚರಿ!: ನಾಯಕ ರೋಹಿತ್ ಶರ್ಮಾಗೇ ತಂಡದಲಿಲ್ಲ ಸ್ಥಾನ; ಹೀಗಿದೆ ಅಂತಿಮ ತಂಡ!