Sleep Divorce Health Benefits: ತಜ್ಞರು ತಿಳಿಸುವಂತೆ ಗಂಡ-ಹೆಂಡತಿ ಒಂದೇ ಹಾಸಿಗೆಯಲ್ಲಿ ಮಲಗುವುದು ಲೈಂಗಿಕತೆಗೆ ಮಾತ್ರವಲ್ಲ, ಪರಸ್ಪರ ಅರ್ಥಮಾಡಿಕೊಳ್ಳಲೂ ಇದು ಅವಕಾಶ ಒದಗಿಸುತ್ತದೆ. ಆದರೆ, ದಂಪತಿ ಒಟ್ಟಿಗೆ ಮಲಗುವ ಬದಲು ಪ್ರತ್ಯೇಕವಾಗಿ ಮಲಗಿದರೆ ಇಬ್ಬರ ನಡುವಿನ ಸಂಬಂಧ ಸರಿಯಿಲ್ಲದೆ ಬೇರೆಯಾಗಲು ಹೊರಟಿದ್ದಾರೆಯೇ? ಎಂಬ ಅನುಮಾನ ಮೂಡಿಸುತ್ತದೆ. ಆದರೆ, ಅಮೆರಿಕದಲ್ಲಿ ಹೆಚ್ಚಿನ ದಂಪತಿಗಳು ಪ್ರತ್ಯೇಕವಾಗಿ ಮಲಗುತ್ತಿದ್ದಾರೆ ಎಂದು ಸರ್ವೇಯೊಂದು ಬಹಿರಂಗಪಡಿಸಿದೆ.
ಸಾಮಾನ್ಯವಾಗಿ, ಇಡೀ ದಿನದ ಕೆಲಸದ ನಂತರ ಜನರು ಶಾಂತಿಯುತವಾಗಿ ನಿದ್ರಿಸಲು ಬಯಸುತ್ತಾರೆ. ಆದರೆ, ಪಾಲುದಾರನ ಕೆಲವು ಅಭ್ಯಾಸಗಳಿಂದ ಇತರ ಪಾಲುದಾರನು ತೊಂದರೆಗೊಳಗಾಗುತ್ತಾನೆ. ಗೊರಕೆ ಹೊಡೆಯುವುದು ಅಥವಾ ಹೆಚ್ಚು ಹೊತ್ತು ಲೈಟ್‌ಗಳನ್ನು ಹಾಕಿಕೊಂಡು ಎಚ್ಚರವಾಗಿರುವುದು, ಫೋನ್‌ಗಳನ್ನು ನೋಡುವುದು.. ಹೀಗೆ ವಿವಿಧ ಕಾರ್ಯಗಳನ್ನು ಮಾಡುವುದರಿಂದ ನಿದ್ರೆ ಕೊರತೆಯಿಂದ ಅನೇಕ ಆರೋಗ್ಯ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಈ ಸಮಸ್ಯೆಗಳಿಂದ ಹೊರಬರಲು ಅಮೆರಿಕ ಹಾಗೂ ಜಪಾನ್ನಲ್ಲಿ ಕೆಲವು ಜೋಡಿಗಳು 'ನಿದ್ರೆ ವಿಚ್ಛೇದನ' ('ಸ್ಲೀಪ್ ಡೈವೋರ್ಸ್) ಪದ್ಧತಿ ಅನುಸರಿಸುತ್ತಿದ್ದಾರೆ.
ಸ್ಲೀಪ್ ಡಿವೋರ್ಸ್ ಎಂದರೆ ದಂಪತಿ ಉತ್ತಮ ನಿದ್ರೆಗಾಗಿ ಪ್ರತ್ಯೇಕವಾಗಿ ಮಲಗುವುದು. ಉದಾಹರಣೆಗೆ, ಹೆಂಡತಿ ಹಗಲು ಪಾಳಿ ಮತ್ತು ಗಂಡ ರಾತ್ರಿ ಪಾಳಿ ಕೆಲಸ ಮಾಡುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಇಬ್ಬರೂ ವಾರಾಂತ್ಯದಲ್ಲಿ ಮಾತ್ರ ಗುಣಮಟ್ಟದ ಸಮಯ ಪರಸ್ಪರ ಕಳೆಯಲು ಸಾಧ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಬ್ಬರೂ ಕೂಡ ವಿಶ್ರಾಂತಿಗಾಗಿ ವಾರಕ್ಕೆ 5 ದಿನಗಳ ನಿದ್ರೆ ವಿಚ್ಛೇದನ ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ಒಬ್ಬರಿಗೊಬ್ಬರು ತೊಂದರೆಯಾಗದಂತೆ ರಾತ್ರಿಯಿಡೀ ನೆಮ್ಮದಿಯಿಂದ ನಿದ್ದೆ ಮಾಡಬಹುದು.
ಸಂಶೋಧನೆಯ ವಿವರಗಳು: ಕಳೆದ ವರ್ಷ, ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ನಲ್ಲಿ 2,005 ವಯಸ್ಕರ ಆನ್‌ಲೈನ್ ಸಮೀಕ್ಷೆ ಮಾಡಿತ್ತು. ಅಮೆರಿಕದಲ್ಲಿ ದಂಪತಿ ಪ್ರತ್ಯೇಕವಾಗಿ ಮಲಗುವುದು ಸಾಮಾನ್ಯವಾಗುತ್ತಿದೆ ಎಂದು ಈ ಸಮೀಕ್ಷೆ ತಿಳಿಸಿದೆ.(ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಶ್ವಾಸಕೋಶಶಾಸ್ತ್ರಜ್ಞ ಮತ್ತು AASM (ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್)ನ ವಕ್ತಾರ ಡಾ. ಸೀಮಾ ಖೋಸ್ಲಾ ಪ್ರತಿಕ್ರಿಯಿಸಿ, "ಕಡಿಮೆ ನಿದ್ರೆಯು ಮನಸ್ಥಿತಿಯನ್ನು ಹದಗೆಡಿಸುತ್ತದೆ, ಅವರ ಪಾಲುದಾರರೊಂದಿಗೆ ವಾದ ಮಾಡುವ ಸಾಧ್ಯತೆ ಹೆಚ್ಚಿಸುತ್ತದೆ. ಮತ್ತು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿಯ ನಿದ್ರೆಯು ಆರೋಗ್ಯ ಹಾಗೂ ಸಂತೋಷ ಎರಡಕ್ಕೂ ತುಂಬಾ ಮುಖ್ಯ. ಇದರಿಂದ ಈ ಸ್ಲೀಪ್ ಡೈವೋರ್ಸ್ ವಿಧಾನಕ್ಕೆ ಒಗ್ಗಿಕೊಳ್ಳುವುದು ಉತ್ತಮ" ಎಂದು ಹೇಳಿದ್ದಾರೆ.
'ಸ್ಲೀಪ್ ಡೈವೋರ್ಸ್'ನ ಪ್ರಯೋಜನಗಳೇನು?:
ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ: ಇದು ದಂಪತಿಯ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಉತ್ತಮ ನಿದ್ರೆಯು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ದೈನಂದಿನ ಜೀವನ ಹಾಗೂ ಸಂಬಂಧಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಒತ್ತಡ ನಿವಾರಣೆ: ನಿದ್ರೆಯ ಕೊರತೆ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಈ ವಿಧಾನದಿಂದ ದಂಪತಿ ಹೆಚ್ಚು ವಿಶ್ರಾಂತಿ, ಶಾಂತವಾಗಿರಬಹುದು.
ಉತ್ತಮ ಸಂಬಂಧ: ಪ್ರತಿದಿನ ಒಟ್ಟಿಗೆ ಮಲಗುವುದು ಮಾತ್ರ ದಂಪತಿಗಳ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೂ, ಸ್ಲೀಪ್ ಡೈವೋರ್ಸ್ನಿಂದ ಒಟ್ಟಿಗೆ ಮಲಗದಿದ್ದರೂ ಕೂಡ ಪ್ರತಿದಿನ ರಾತ್ರಿ ಮಲಗುವಾಗ ಹಾಗೂ ಬೆಳಗ್ಗೆ ಏಳುವ ಸಮಯದಲ್ಲಿ ಆತ್ಮೀಯವಾಗಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು, ಪ್ರೀತಿಯಿಂದ ಮುತ್ತಿಡುವುದು, ಸಾಧ್ಯವಾದಾಗಲೆಲ್ಲಾ ಒಟ್ಟಿಗೆ ಸಮಯ ಕಳೆಯುವುದು, ದಿನನಿತ್ಯದ ವ್ಯಾಯಾಮಗಳನ್ನು ಮಾಡುವುದರಿಂದ ಬಾಂಧವ್ಯ ಗಟ್ಟಿಯಾಗುತ್ತದೆ. ಈ ನಿದ್ರಾ ವಿಚ್ಛೇದನವು ದಾಂಪತ್ಯ ಜೀವನವನ್ನೂ ಸುಧಾರಿಸುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.