ನವದೆಹಲಿ: ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ ಟೆಸ್ಟ್ನಲ್ಲಿ ಹೀನಾಯ ಸೋಲು ಕಂಡಿದ್ದು ಇದೀಗ ಎರಡನೇ ಟೆಸ್ಟ್ಗೆ ಅಣಿಯಾಗಿದೆ. ಫೆಬ್ರವರಿ 2ರಂದು ವಿಶಾಖಪಟ್ಟಣದ ವೈ.ಎಸ್.ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಹೈದರಾಬಾದ್‌ನಿಂದ ವಿಶಾಖಪಟ್ಟಣಂ ತಲುಪಿದೆ. ತಂಡದ ಭೇಟಿಯ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಟೀಂ ಇಂಡಿಯಾ ಆಟಗಾರರು ಹೈದರಾಬಾದ್ ಏರ್‌ಪೋರ್ಟ್‌ನಿಂದ ವಿಶಾಖಪಟ್ಟಣಕ್ಕೆ ವಿಮಾನದಲ್ಲಿ ಹೋಗುತ್ತಿರುವುದನ್ನು ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ನೋಡಬಹುದು. ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ಅಭಿಮಾನಿಗಳತ್ತ ಕೈಬೀಸುತ್ತಾ ತೆರಳಿದರು. ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಂಡದ ಆಟಗಾರರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಹೋಟೆಲ್‌ಗೆ ಆಗಮಿಸಿದಾಗ ಹೂಮಾಲೆ ಹಾಕಿ ಬರಮಾಡಿಕೊಳ್ಳಲಾಯಿತು.
ಇಂಗ್ಲೆಂಡ್ ಮೊದಲ ಪಂದ್ಯದ ಗೆಲುವಿನೊಂದಿಗೆ 1-0 ಮುನ್ನಡೆ ಸಾಧಿಸಿದೆ. ಸೋಲಿನ ಹತಾಶೆಯಲ್ಲಿರುವ ಭಾರತ, ಎರಡನೇ ಟೆಸ್ಟ್ ಪಂದ್ಯದಲ್ಲಿ ಪುಟಿದೇಳುವ ನಿರೀಕ್ಷೆ ಇದೆ. ಹಾಗಾಗಿ ಈ ಪಂದ್ಯಕ್ಕೆ ತಂಡದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಗಾಯಗೊಂಡಿರುವ ರವೀಂದ್ರ ಜಡೇಜಾ ಮತ್ತು ಕೆ.ಎಲ್.ರಾಹುಲ್ ತಂಡದಿಂದ ಹೊರಗುಳಿದಿದ್ದು, ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ನೀಡಲಾಗಿದೆ.
ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಸತತವಾಗಿ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಅಲ್ಲದೆ, ವೈಯಕ್ತಿಕ ಕಾರಣಗಳಿಂದ ಮೊದಲ ಎರಡು ಟೆಸ್ಟ್‌ಗಳಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಇಲ್ಲದೆ ಬ್ಯಾಟಿಂಗ್ ವಿಭಾಗ ಅಲುಗಾಡುತ್ತಿದೆ.
ಇದನ್ನೂ ಓದಿ: ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಆರೋಗ್ಯ ಸ್ಥಿರ; ಮುಂದುವರಿದ ಚಿಕಿತ್ಸೆ, ಪ್ರಕರಣ ದಾಖಲು