IND vs ENG, 2nd ODI:ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ಮತ್ತು ಇಂಗ್ಲೆಂಡ್ ತಂಡಗಳು 3 ಪಂದ್ಯಗಳ ಏಕದಿನ ಸರಣಿ ಆಡುತ್ತಿವೆ. ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿರುವ ಭಾರತ 4 ವಿಕೆಟ್ಗಳಿಂದ ಆಂಗ್ಲರನ್ನು ಬಗ್ಗು ಬಡೆದಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಎರಡನೇ ಪಂದ್ಯದಲ್ಲೂ ಇದೆ ಆಟವನ್ನು ಮುಂದುವರೆಸಿ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಸಂಕಲ್ಪ ತೊಟ್ಟಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಆದ ತಪ್ಪುಗಳನ್ನು ತಿದ್ದಿಕೊಂಡು ಎರಡನೇ ಮ್ಯಾಚ್ನಲ್ಲಿ ಗೆಲುವು ಸಾಧಿಸಲು ಆಂಗ್ಲ ಪಡೆ ಸಿದ್ಧತೆ ನಡೆಸುತ್ತಿದೆ.
ಜೈಸ್ವಾಲ್ ಅಥವಾ ಅಯ್ಯರ್ಗೆ ಕೋಕ್: ಉಭಯ ತಂಡಗಳ ನಡುವಿನ ಈ ಪಂದ್ಯ ಕಟಕ್ನ ಬಾರಾಬತಿ ಮೈದಾನದಲ್ಲಿ ನಡೆಯಲಿದೆ. ಆದರೆ ಎರಡನೇ ಪಂದ್ಯದಲ್ಲಿ ಕೆಲ ಬದಲಾವಣೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಮೊದಲ ಪಂದ್ಯವನ್ನು ಆಡಿರುವ ಯಶಸ್ವಿ ಜೈಸ್ವಾಲ್ ಅಥವಾ ಶ್ರೇಯಸ್ ಅಯ್ಯರ್ ಇಬರಲ್ಲಿ ಒಬ್ಬರಿಗೆ ಕೋಕ್ ನೀಡುವ ಸಾಧ್ಯತೆ ಇದೆ. ಏಕೆಂದರೆ ಗಾಯದಿಂದಾಗಿ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯ ಆಡಲು ಸಜ್ಜಾಗಿದ್ದಾರೆ.
5 ತಿಂಗಳ ಬಳಿಕ ಕೊಹ್ಲಿ ಕಮ್ಬ್ಯಾಕ್:ಭಾರತದ ಸ್ಟಾರ್ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ 5 ತಿಂಗಳ ಬಳಿಕ ಏಕದಿನ ಪಂದ್ಯಕ್ಕೆ ಮರಳಲಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಇದರ ಬಳಿಕ ಭಾರತ ಏಕದಿನ ಪಂದ್ಯಗಳನ್ನು ಆಡಿರಲಿಲ್ಲ.