ಹೈದರಾಬಾದ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 9 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಈ ವರ್ಷದ ಜನವರಿ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ಕೊಹ್ಲಿ, ಇದೀಗ ಬಾಂಗ್ಲಾದೇಶ ವಿರುದ್ಧ ಸೆ.19 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಐತಿಹಾಸಿಕ ಸಾಧನೆಯ ಸಮೀಪದಲ್ಲಿರುವ ಕೊಹ್ಲಿ ಪಾಲಿಗೆ ಈ ಸರಣಿ ಮಹತ್ವದಾಗಿದೆ.
ಹೌದು, ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ದೊಡ್ಡ ದಾಖಲೆಯೊಂದನ್ನು ನಿರ್ಮಿಸುವ ಸುವರ್ಣವಕಾಶವನ್ನು ಹೊಂದಿದ್ದಾರೆ. ಇದಕ್ಕಾಗಿ ಕೇವಲ 58 ರನ್‌ಗಳ ಅವಶ್ಯಕತೆ ಇದೆ. ಒಂದು ವೇಳೆ ಕೊಹ್ಲಿ ಈ ಮೊತ್ತವನ್ನು ಕಲೆಹಾಕಿದ್ದೇ ಆದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಸದ್ಯ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಲಿದ್ದೆ. ಅವರು ಒಟ್ಟು 623 ಇನ್ನಿಂಗ್ಸ್‌ಗಳಲ್ಲಿ 27,000 ರನ್ ಪೂರೈಸಿರುವ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಇದೀಗ ಕೊಹ್ಲಿ ಈ ದಾಖಲೆಯನ್ನು ಮುರಿಯುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಬಹುದಾಗಿದೆ. ಕೊಹ್ಲಿ ಇದುವರೆಗೂ 591 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನಾಡಿದ್ದು, ಇದರಲ್ಲಿ 26,942 ರನ್ ಗಳಿಸಿದ್ದಾರೆ.