ಬಾರ್ಬಡೋಸ್/ಹೈದರಾಬಾದ್:ಮೆನ್ ಇನ್ ಬ್ಲೂ ಪಡೆಯ ಮಾಜಿ ಬ್ಯಾಟರ್ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್ 2024ರ ಮುಕ್ತಾಯದೊಂದಿಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಹೊರ ನಡೆದಿದ್ದು, ತಮ್ಮ ವೃತ್ತಿಜೀವನವನ್ನು ಗೆಲುವಿನ ಗೌರವ ಹಾಗೂ ಸಂತಸದೊಂದಿಗೆ ಕೊನೆಗೊಳಿಸಿದ್ದಾರೆ.
ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿ ಸಾಧನೆ ಮಾಡಿದೆ. ಟೆಸ್ಟ್ ಸ್ಪೆಷಲಿಸ್ಟ್ ಹಾಗೂ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ದ್ರಾವಿಡ್ ಒಬ್ಬ ಕ್ರಿಕೆಟ್ ದಂತಕಥೆಯೂ ಹೌದು.
ಭಾರತದ ಮಾಜಿ ಆಲ್‌ರೌಂಡರ್ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ನಂತರ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ದ್ರಾವಿಡ್ ಕೋಚ್ ಆಗಿ ನಿಯುಕ್ತಿಗೊಂಡಿದ್ದರು.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮತ್ತು ಭಾರತ U-19 ತಂಡದ ಮುಖ್ಯಸ್ಥರಾಗಿದ್ದ ದ್ರಾವಿಡ್ ನಂತರ ಹಿರಿಯ ತಂಡದ ಮುಖ್ಯ ತರಬೇತಿದಾರರಾಗಿ ಅತ್ಯದ್ಬುತವಾದ ಪಾತ್ರವನ್ನು ವಹಿಸಿಕೊಂಡರು. ICC ODI 2023 ರ ವಿಶ್ವಕಪ್ ನಂತರ ಅವರ ಮೊದಲ ಅವಧಿ ಕೊನೆಗೊಂಡಿತ್ತು. ವಿಶ್ವಕಪ್ ನಲ್ಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ರೋಹಿತ್ ಪಡೆ ಅವಿಸ್ಮರಣೀಯ ಸೋಲು ಕಂಡಿತ್ತು. ಈ ಸೋಲಿನ ಹೊರತಾಗಿಯೂ BCCI ರಾಹುಲ್ ದ್ರಾವಿಡ್ ಅವರನ್ನು T20 ವಿಶ್ವಕಪ್ 2024 ರ ಅಂತ್ಯದವರೆಗೆ ಕೋಚ್ ಆಗಿಯೇ ಮುಂದುವರೆಸಿತ್ತು. ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಮಾರ್ಗದರ್ಶನದಲ್ಲೇ ಭಾರತವು ಮೂರು ಸ್ವರೂಪಗಳಲ್ಲಿ - T20s, ODIs ಮತ್ತು ಟೆಸ್ಟ್‌ಗಳಲ್ಲಿ ಗಣನೀಯ ಯಶಸ್ಸನ್ನು ಸಾಧಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಪ್ರಮುಖ ಐಸಿಸಿ ಟ್ರೋಪಿಗಳನ್ನು ಹೊರತು ಪಡಿಸಿ ಬಹುತೇಕ ಸರಣಿಗಳಲ್ಲಿ ಭಾರತ ತಂಡ ಅದ್ಬುತ ಪ್ರದರ್ಶನವನ್ನೇ ನೀಡಿದೆ.