ನವದೆಹಲಿ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದು, ಗೊತ್ತಿರುವ ವಿಷಯ. ಇಷ್ಟೇ ಅಭಿಮಾನಿಗಳನ್ನು ಹೊಂದಿರುವ ಪಿಎಸ್‌ಜಿ (ಪ್ಯಾರಿಸ್ ಸೇಂಟ್ ಜರ್ಮೈನ್) ಸ್ಟಾರ್ ಫುಟ್ಬಾಲ್ ಆಟಗಾರ ಅಶ್ರಫ್ ಹಕಿಮಿ ಅವರ ವೈಯಕ್ತಿಕ ಜೀವನ ಕೂಡ ಇದೇ ಹಾದಿಯಲ್ಲಿತ್ತು ಎಂಬ ವರದಿ ಇದೀಗ ಬಹಿರಂಗಗೊಂಡಿದೆ. ಬಾಲಿವುಡ್ ನಟಿ, ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತು ಪಾಂಡ್ಯ ಅವರ ಡಿವೋರ್ಸ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದೀಗ ಅಶ್ರಫ್ ಹಕಿಮಿ ಅವರ ಸುದ್ದಿ ಕೂಡ ಮುನ್ನೆಲೆಗೆ ಬಂದಿದೆ. ಇಬ್ಬರು ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಏರಿಳಿತ ಕೂಡ ಒಂದೇ ರೀತಿಯದ್ದಾಗಿದ್ದರಿಂದ ಇಬ್ಬರು ಒಂದೇ ದೋಣಿಯ ಪಯಣಿಗರು ಎಂಬ ಮಾತು ಕೇಳಿ ಬರುತ್ತಿದೆ.
ಸ್ಟಾರ್ ದಂಪತಿ ವಿಚ್ಛೇದನದ ಇತ್ಯರ್ಥದ ಭಾಗವಾಗಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ.70ರಷ್ಟು ಪತ್ನಿ ನತಾಸಾಗೆ ವರ್ಗಾಯಿಸಬೇಕಾಗಬಹುದು ಎಂಬ ವದಂತಿ ಹರಿದಾಡುತ್ತಿವೆ. ಈ ರೀತಿಯ ವಿಚ್ಛೇದನ ಪ್ರಕರಣ ಇದೇ ಮೊದಲೇನು ಅಲ್ಲ. ಪಿಎಸ್‌ಜಿ ಪರ ಆಡುತ್ತಿರುವ ಮೊರೊಕ್ಕನ್ ಸ್ಟಾರ್ ಫುಟ್ಬಾಲ್ ಆಟಗಾರ ಅಶ್ರಫ್ ಹಕಿಮಿ ಕೂಡ ಇಂತಹದ್ದೇ ಪ್ರಕರಣಕ್ಕೆ ತುತ್ತಾದವರು ಎಂಬ ಸುದ್ದಿ ಇದೀಗ ಮುನ್ನೆಲೆ ಬಂದಿದೆ. ಮದುವೆಯಾದ ಮೂರು ವರ್ಷಗಳ ನಂತರ ಅಶ್ರಫ್ ಅವರಿಂದ ವಿಚ್ಛೇದನಕ್ಕೆ ಬಯಸಿ ಅರ್ಜಿ ಸಲ್ಲಿಸಿದ್ದ ಅವರ ಪತ್ನಿ ಒಟ್ಟು ಆಸ್ತಿಯಲ್ಲಿ ಅರ್ಧದಷ್ಟು ಬೇಡಿಕೆಯಿಟ್ಟಿದ್ದರು. ಆದರೆ, ಕಾನೂನು ಅರಿತುಕೊಂಡಿದ್ದ ಅಶ್ರಫ್ ಅವರ ತಾಯಿ, ಈ ದೊಡ್ಡ ಬಿಕ್ಕಟ್ಟಿನಿಂದ ತಮ್ಮ ಪುತ್ರನನ್ನು ರಕ್ಷಿಸಿದ್ದು ವರದಿಯಾಗಿತ್ತು. ಅದರಂತೆ ಹಾರ್ದಿಕ್ ಪಾಂಡ್ಯ ಅವರ ಆಸ್ತಿ ವಿಚಾರ ಕೂಡ ಹಾಗೆಯೇ ಆಗಬಹುದು ಎಂಬ ಲೆಕ್ಕಾಚಾರ ನಡೆದಿವೆ.
ಅಶ್ರಫ್ ಪತ್ನಿಗೆ ಶಾಕ್:ಪತಿ ಅಶ್ರಫ್ನಿಂದ 2023ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಅವರ ಪತ್ನಿ, ಜೀವನಾಂಶ ವಿಚಾರವಾಗಿ ಕೋರ್ಟ್ ಮೆಟ್ಟಿಲು ಸಹ ಹತ್ತಿದ್ದರು. ಆಗ ನ್ಯಾಯಾಲಯವು, ಎಲ್ಲ ಆಸ್ತಿ ಅಶ್ರಫ್ ಅವರ ತಾಯಿಯ ಹೆಸರಲ್ಲಿ ನೋಂದಣಿಯಾಗಿದ್ದು, ಕೋಟ್ಯಧಿಪತಿಯಾದರೂ ಅಶ್ರಫ್ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ತಿಳಿಸಿತ್ತು. ಈ ಸುದ್ದಿ ಅಶ್ರಫ್ ಪತ್ನಿಗೆ ಶಾಕ್ ಆಗಿತ್ತು. ತಿಂಗಳಿಗೆ $1 ಮಿಲಿಯನ್ ಆದಾಯ ಹೊಂದಿದ್ದ ಅಶ್ರಫ್, ತಾವು ಗಳಿಸುತ್ತಿದ್ದ ಹಣವನ್ನು ನೇರವಾಗಿ ತನ್ನ ತಾಯಿಯ ಖಾತೆಗೆ ಜಮಾ ಮಾಡುತ್ತ ಬಂದಿದ್ದರು. ಮನೆ, ಜಮೀನು, ಕಾರು, ಆಭರಣ ಸಹ ತಾಯಿಯ ಹೆಸರಲ್ಲಿ ಖರೀದಿ ಮಾಡಿದ್ದರು. ಅದರಂತೆ ಹಾರ್ದಿಕ್ ಪಾಂಡ್ಯ ಅವರ ಆಸ್ತಿ ವಿಚಾರ ಕೂಡ ಹಾಗೆಯೇ ಆಗಬಹುದು ಎಂಬ ಲೆಕ್ಕಾಚಾರ ನಡೆದಿವೆ. ಕಾರಣ, ಮನೆ, ಕಾರು ಮತ್ತು ಆಭರಣ ಎಲ್ಲ ಆಸ್ತಿ ತನ್ನ ತಾಯಿಯ ಹೆಸರಿನಲ್ಲಿದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿರುವ ಹಾರ್ದಿಕ್ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.