ಅಮ್ರೋಹಾ (ಉತ್ತರ ಪ್ರದೇಶ): ಯುವಕನೊಬ್ಬ ನಡುರಸ್ತೆಯಲ್ಲೇ ಯುವತಿಯ ಕತ್ತನ್ನು ಸ್ಕಾರ್ಫ್‌ನಿಂದ ಬಿಗಿದು ಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಅಮ್ರೋಹಾ ಜಿಲ್ಲೆಯ ಗಜ್ರೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯ ಕಿರುಚಾಟ ಕೇಳಿದ ದಾರಿಹೋಕರು ಯುವಕನ ಹಿಡಿತದಿಂದ ಆಕೆಯನ್ನು ಬಿಡಿಸಿದ್ದಾರೆ. ನಂತರ ಯುವಕ ನೆರೆದಿದ್ದ ಜನರನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಕಾಣುವಂತೆ ನಡುರಸ್ತೆಯಲ್ಲೇ ಯುವಕ, ಯುವತಿಯ ಕತ್ತನ್ನು ಸ್ಕಾರ್ಫ್‌ನಿಂದ ಬಿಗಿದು ಹತ್ಯೆಗೆ ಯತ್ನಿಸುತ್ತಿದ್ದು, ಯುವತಿ ಆತನ ಹಿಡಿತದಿಂದ ಬಿಡಿಸಿಕೊಳ್ಳಲು ಹರಸಾಹನ ಪಡುತ್ತಿದ್ದು, ಬಳಿಕ ದಾರಿಹೋಕರು ಆಗಮಿಸಿ ಯುವಕನಿಂದ ಯುವತಿಯನ್ನು ರಕ್ಷಿಸಿದ್ದಾರೆ. ಘಟನೆ ಸಂಬಂಧ ಯುವತಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.
ಆರೋಪಿ ಮತ್ತು ಯುವತಿ ಒಂದೇ ಗ್ರಾಮದವರಾಗಿದ್ದಾರೆ. ಯುವತಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಜಿಎನ್‌ಎಂ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಗ್ರಾಮಸ್ಥರ ಪ್ರಕಾರ, ಯುವಕ ಕಳೆದ ನಾಲ್ಕು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಇದೇ ವೇಳೆ ಯುವತಿ ಇತರ ಯುವಕರೊಂದಿಗೆ ಸಲುಗೆಯಿಂದಿರುವುದನ್ನು ಹಲವು ಬಾರಿ ನೋಡಿದ್ದ. ಇದರಿಂದ ಕೋಪಗೊಂಡು ಶನಿವಾರ ಸಂಜೆ ಯುವತಿ ತನ್ನ ಗ್ರಾಮವಾದದಿಂದ ಯಾವುದೋ ಕೆಲಸದ ನಿಮಿತ್ತ ಸ್ಕೂಟರ್‌ನಲ್ಲಿ ಗಜ್ರೌಲಾ -ಸೇಲಂಪುರ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಯುವಕ, ಯುವತಿಯ ಸ್ಕೂಟರ್ನನ್ನು ತಡೆದು ನಿಲ್ಲಿಸಿ ಮೊದಲು ಮಾತನಾಡಿಸಿದ್ದಾನೆ. ನಂತರ ಆಕೆಯ ಸ್ಕಾರ್ಫ್‌ನಿಂದ ಕತ್ತು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಕಿರುಚಾಟ ಕೇಳಿದ ದಾರಿಹೋಕರು ಬಂದು ರಕ್ಷಿಸಿದ್ದಾರೆ.
"ಯುವತಿಯ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಆರೋಪಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುತ್ತದೆ" ಎಂದು ಇನ್ಸ್‌ಪೆಕ್ಟರ್ ಸನೋಜ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್‌ನ ಪೋರ್‌ಬಂದರ್‌ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ: ಮೂವರು ಸಿಬ್ಬಂದಿ ಸಾವು