ರತ್ಲಾಮ್ (ಮಧ್ಯಪ್ರದೇಶ): ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಸ್ಕೂಟಿ ಸ್ಫೋಟಗೊಂಡ ಪರಿಣಾಮ 11 ವರ್ಷದ ಬಾಲಕಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ಮಧ್ಯಪ್ರದೇಶದ ರತ್ಲಾಮ್ನಲ್ಲಿ ಶನಿವಾರ ರಾತ್ರಿ ನಡೆದಿದೆ.
ಮನೆಯಲ್ಲಿ ಇ ಸ್ಕೂಟಿ ಚಾರ್ಜ್ ಹಾಕಿದ್ದ ವೇಳೆ ರಾತ್ರಿ 2.30ರ ಸುಮಾರಿಗೆ ಸ್ಫೋಟಗೊಂಡು ಮನೆಗೆ ಬೆಂಕಿ ಹೊತ್ತುಕೊಂಡಿತ್ತು. ಸ್ಫೋಟದ ಶಬ್ಧ ಕೇಳಿ ಬಂದ ನೆರೆಯವರು ತಕ್ಷಣವೇ ರಕ್ಷಣಾ ಕಾರ್ಯ ಕೈಗೊಂಡು ಬೆಂಕಿ ನಂದಿಸಿದ್ದರು. ಆದರೆ 11 ವರ್ಷದ ಬಾಲಕಿ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಜೊತೆಗೆ ಇಬ್ಬರಿಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮೃತ ಬಾಲಕಿಯನ್ನು ಅಂತಾರಾ ಚೌಧರಿ ಎಂದು ಗುರುತಿಸಲಾಗಿದೆ. ಬಾಲಕಿ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಬರೋಡಾದಿಂದ ಬಾಲಕಿ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಭಾನುವಾರ ಮರಳಿ ಬರೋಡಾಗೆ ಬಾಲಕಿ ಹೋಗುತ್ತಿದ್ದಳು. ಆದರೆ ರಾತ್ರಿ ನಡೆದ ಇ ಸ್ಕೂಟಿ ಸ್ಫೋಟದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿಯ ಅಜ್ಜಿ ಭಗವತಿ ಮೋರೆ ಮತ್ತು 12 ವರ್ಷದ ಬಾಲಕಿ ಲಾವಣ್ಯ ತೀವ್ರವಾಗಿ ಗಾಯಗೊಂಡಿದ್ದಾರೆ.
ಇ ಸ್ಕೂಟರ್ ಸ್ಫೋಟಗೊಂಡ ಕುರಿತು ಮಾಹಿತಿ ಬಂದ ಬಳಿಕ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ 11 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಇಂಡಸ್ಟ್ರೀಯಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಹಮದಾಬಾದ್ನಲ್ಲೂ ಕಳೆದ ವರ್ಷ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಚಾರ್ಜಿಂಗ್ ಮಾಡುವಾಗ ಇ ಸ್ಕೂಟರ್ ಬ್ಯಾಟರಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಇಡೀ ಮನೆ ಹೊತ್ತು ಉರಿದಿತ್ತು.
ಇದನ್ನೂ ಓದಿ: ಗುಜರಾತ್‌ನ ಪೋರ್‌ಬಂದರ್‌ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ: ಮೂವರು ಸಿಬ್ಬಂದಿ ಸಾವು