ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ ಕಾರ್ಯಾಚರಣೆ ಐದನೇ ದಿನವೂ ಮುಂದುವರೆದಿದೆ. ಚಿರತೆಯ ಚಲನವಲನದ ಬಗ್ಗೆ ಈವರೆಗೆ ಸುಳಿವು ಕಂಡುಬಂದಿಲ್ಲ.
ಡಿಸೆಂಬರ್ 31ರಂದು ಮುಂಜಾನೆ ಇನ್ಫೋಸಿಸ್ ಭದ್ರತಾ ಸಿಬ್ಬಂದಿಗಳ ಜೀಪ್‌ಗೆ ಅಡ್ಡಲಾಗಿ ಹಾದು ಹೋಗಿದ್ದ ಚಿರತೆಯ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಬಿಟ್ಟರೆ, ಕಳೆದ ಐದು ದಿನದಿಂದ ಚಿರತೆ ಯಾರ ಕಣ್ಣಿಗೂ ಕಂಡಿಲ್ಲ.
ಚಿರತೆ ಸೆರೆಗಾಗಿ ಇನ್ಫೋಸಿಸ್ ಆವರಣದಲ್ಲಿ 12ಕ್ಕೂ ಹೆಚ್ಚು ಕ್ಯಾಮರಾ ಟ್ರ್ಯಾಪ್ಗಳನ್ನು ಅಳವಡಿಸಲಾಗಿದ್ದು, ಎರಡು ಬೋನ್ಗಳನ್ನು ಇರಿಸಲಾಗಿತ್ತು. ಆದರೆ ಚಿರತೆ ಮಾತ್ರ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕೈಗೆ ಸಿಗದೆ ಆವಾಸಸ್ಥಾನವನ್ನು ಬೇರೆ ಕಡೆ ಬದಲಾಯಿಸುತ್ತಿದೆ.
ಈ ನಡುವೆ ಅರಣ್ಯ ಸಿಬ್ಬಂದಿಗಳು ಭಾನುವಾರ ಇನ್ಫೋಸಿಸ್ ಆವರಣದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದ್ದು, ಚಿರತೆಯ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಇದ್ದ ಸ್ಥಳದಲ್ಲಿ ಮತ್ತೆ 10 ಕ್ಯಾಮರಾ ಟ್ರ್ಯಾಪ್ ಅನ್ನು ಅಳವಡಿಸಿ, ಒಂದು ಬೋನನ್ನು ಇರಿಸಿ ಚಿರತೆ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು.
"ಇಂದು ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ ಹಾಗೂ ಮೈಸೂರು ಪ್ರಾದೇಶಿಕ ವಲಯದ ಸಿಬ್ಬಂದಿಗಳು ಚಿರತೆ ಸೆರೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಹೆಜ್ಜೆ ಗುರುತುಗಳನ್ನು ಆಧರಿಸಿ ಹೆಚ್ಚುವರಿಯಾಗಿ 10 ಕ್ಯಾಮರಾ ಟ್ರ್ಯಾಪ್ಗಳನ್ನು ಮತ್ತು ಒಂದು ಟ್ರ್ಯಾಪ್ ಕೇಜ್ ಅಳವಡಿಸಲಾಗಿದೆ. ಕ್ಯಾಮರಾ ಟ್ರ್ಯಾಪ್, ಡ್ರೋನ್ ಕ್ಯಾಮರಾ, ಕ್ಯಾಂಪಸ್ನಲ್ಲಿರುವ ಸಿಸಿಟಿವಿ ಕ್ಯಾಮರಾಗಳ ನಿಗಾವಣೆಯನ್ನು ಮುಂದುವರಿಸಲಾಗುತ್ತದೆ. ಒಂದು ಚಿರತೆ ಕಾರ್ಯಪಡೆ ತಂಡವನ್ನು ಕ್ಯಾಂಪಸ್ನಲ್ಲಿಯೇ ನಿಯೋಜಿಸಲಾಗಿದೆ" ಎಂದು ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ ಬ್ಯಾರಿಕೇಡ್ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಕಾಡಾನೆ; ಜೆಸಿಬಿ ಸಹಾಯದಿಂದ ರಕ್ಷಣೆ- ವಿಡಿಯೋ