ಹೈದರಾಬಾದ್:ಟಿ20 ವಿಶ್ವಕಪ್ ಮುಕ್ತಾಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ20 ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಿಂಚುವ ಮೂಲಕ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ.
ಈ ಮೂಲಕ ಶ್ರೀಲಂಕಾದ ವನಿಂದು ಹಸರಂಗ ಅವರೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಪುರುಷರ ಟಿ20ಐ ಆಲ್‌ರೌಂಡರ್ ವಿಭಾಗದಲ್ಲಿ ಎರಡು ಸ್ಥಾನ ಮೇಲಕ್ಕೇರುವ ಮೂಲಕ ಪಾಂಡ್ಯ, ಹಸರಂಗ ಅವರ ರ‍್ಯಾಂಕಿಂಗ್ ಸರಿಗಟ್ಟಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ ತಮ್ಮ 30 ವರ್ಷ ವಯಸ್ಸಿನಲ್ಲಿ ಐಸಿಸಿ ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 17ನೇ ಓವರ್ ಬೌಲ್ ಮಾಡಿದ್ದ ಹಾರ್ದಿಕ್, 27 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿದ್ದ ಸ್ಫೋಟಕ ಬ್ಯಾಟ್ಸಮನ್ ಹೆನ್ರಿಕ್ ಕ್ಲಾಸೆನ್ ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೇ ಬಸಲಿಸಿದ್ದರು. ನಂತರ ಅವರು ಅಂತಿಮ ಓವರ್‌ನಲ್ಲಿ ಬೌಲ್ ಮಾಡಿ 16 ರನ್‌ಗಳನ್ನು ಯಶಸ್ವಿಯಾಗಿ ರಕ್ಷಿಸುವ ಮೂಲಕ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲಲು ಕಾರಣರಾದರು.