ಬೆಂಗಳೂರು:ಐಪಿಎಲ್‌ನಲ್ಲಿ ಪಡೆದುಕೊಂಡಿರುವ ಅನುಭವ ಮತ್ತು ಆತ್ಮವಿಶ್ವಾಸವನ್ನು ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮುಂದುವರೆಸುವ ಉತ್ಸಾಹದಲ್ಲಿರುವ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಉಪನಾಯಕ ವೈಶಾಕ್ ವಿಜಯ್‌ಕುಮಾರ್, ವಿರಾಟ್ ಕೊಹ್ಲಿಯೊಂದಿಗಿನ ತರಬೇತಿ ಆಟಗಾರನಾಗಿದ್ದುದು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಐಪಿಎಲ್ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಅವರ ಶಿಸ್ತು, ತರಬೇತಿ ಪ್ರಕ್ರಿಯೆ ಮತ್ತು ಸ್ಥಿರತೆಯಂತಹ ಸೂಕ್ಷ್ಮ ವಿವರಗಳನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಅದು ಆಹಾರ ಪದ್ಧತಿಯಾಗಿರಲಿ ಅಥವಾ ಅಭ್ಯಾಸದ ದಿನಚರಿಯಾಗಿರಲಿ ಎಲ್ಲವನ್ನೂ ತುಂಬಾ ನಿಖರವಾಗಿ ಮಾಡುತ್ತಾರೆ. ಪ್ರತೀ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸದಿಂದ ಇರುತ್ತಾರೆ. ನಾನೂ ಸಹ ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅದೇ ಆತ್ಮವಿಶ್ವಾಸದಿಂದಿರಲು ಪ್ರಯತ್ನಿಸುತ್ತೇನೆ ಎಂದರು.
ಇದೇ ವೇಳೆ ಐಪಿಎಲ್‌ನಲ್ಲಿನ ಅವರ ಸಹ ಆಟಗಾರ ಮೊಹಮ್ಮದ್ ಸಿರಾಜ್ ಕುರಿತು ಮಾತನಾಡಿ, ಆರ್‌ಸಿಬಿ ಪರ ಕಣಕ್ಕಿಳಿದ ಮೊದಲ ಪಂದ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದ್ದೆ. ಆದರೆ ಮುಂದಿನ ಪಂದ್ಯದಲ್ಲಿ 60 ರನ್‌ಗಳನ್ನು ಬಿಟ್ಟುಕೊಟ್ಟಿದ್ದೆ. ಈ ಸಂದರ್ಭದಲ್ಲಿ, ಇದು ಕ್ರೀಡೆ. ಕ್ರೀಡೆಯಲ್ಲಿನ ಅತ್ಯುನ್ನತ ಮಟ್ಟದಲ್ಲಿ ಎದುರಾಗುವ ಸವಾಲು. ನಾನು ಈ ಪಾಠವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.
ಕಳೆದ ಬಾರಿ ದೇವದತ್ ಪಡಿಕ್ಕಲ್ ಅವರ ಅನುಪಸ್ಥಿತಿಯಲ್ಲಿ ಮಿಸ್ಟಿಕ್ಸ್ ತಂಡ ಮೂರನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಈ ಬಾರಿ ಉತ್ತಮವಾಗಿ ಟೂರ್ನಿಯನ್ನು ಮುಗಿಸಲು ಬಯಸುತ್ತೇವೆ. ಉತ್ತಮವಾದ ಪ್ರದರ್ಶನ ನೀಡಲಿದ್ದೇವೆ. ಬ್ಯಾಟಿಂಗ್‌ನಲ್ಲಿ ಸಹ ನಾನು ಕೊಡುಗೆ ನೀಡಲು ಆಶಿಸುತ್ತಿದ್ದೇನೆ ಎಂದು ತಿಳಿಸಿದರು.