ಬಾಲಕಿಯರ ವಾಲಿಬಾಲ್ ಫೈನಲ್ ಪಂದ್ಯ ಶಿವಮೊಗ್ಗ:ನಗರದ ನೆಹರು ಕ್ರೀಡಾಂಗಣದಲ್ಲಿ ಗುರುವಾರ ನಡೆದ 19 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ಫೈನಲ್ ಪಂದ್ಯಾವಳಿಯಲ್ಲಿ ಗುಜರಾತ್ ತಂಡವನ್ನು ಪಶ್ಚಿಮ ಬಂಗಾಳ ಸೋಲಿಸಿದ್ದು, ಟ್ರೋಫಿ ತನ್ನದಾಗಿಸಿಕೊಂಡಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆದ ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ 67ನೇ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಗುಜರಾತ್ ಹಾಗೂ ಪಶ್ಚಿಮ ಬಂಗಾಳ ನಡುವೆ ಭರ್ಜರಿ ಪೈಪೋಟಿ ನಡೆಯಿತು.
ಮಹಾರಾಷ್ಟ್ರವನ್ನು ಸೋಲಿಸಿ ಪಶ್ಚಿಮ ಬೆಂಗಾಳ ಫೈನಲ್ ಪ್ರವೇಶಿಸಿದರೆ, ಕೇರಳವನ್ನು ಮಣಿಸಿ ಗುಜರಾತ್ ಪ್ರಶಸ್ತಿ ಸುತ್ತು ತಲುಪಿತ್ತು. ಆರಂಭದಲೇ ಬಂಗಾಳ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಮೊದಲ ಸುತ್ತಿನಲ್ಲಿ ಬಂಗಾಳ 25 ಅಂಕಗಳನ್ನು ಪಡೆದರೆ, ಗುಜರಾತ್ 14 ಅಂಕ ಪಡೆದಿತ್ತು. ಎರಡನೇ ಸುತ್ತಿನಲ್ಲಿ ಗುಜರಾತ್ 15 ಅಂಕ ಗಳಿಸಿದರೆ, ಬಂಗಾಳ 25 ಅಂಕ ಪಡೆಯಿತು.
ಮೂರನೇ ಸೆಟ್ನಲ್ಲಿ ಗುಜರಾತ್ ಪ್ರಬಲವಾಗಿ ಪ್ರತಿರೋಧ ತೋರಿದರೂ ಬಂಗಾಳದ ಭರ್ಜರಿ ಪ್ರದರ್ಶನ ನೀಡಿತು. ಒಂದು ಹಂತದಲ್ಲಿ ಗುಜರಾತ್ ಮೂರನೇ ಸುತ್ತಿನಲ್ಲಿ ಆರೇಳು ಅಂಕದಿಂದ ಮುಂದೆ ಸಾಗಿದರೂ ಕೊನೆ ಹಂತದಲ್ಲಿ ಎಡವಿತು. ಅಂತಿಮವಾಗಿ, 25-23 ಅಂಕಗಳ ಅಂತರದಿಂದ ಪಶ್ಚಿಮ ಬಂಗಾಳ ಕಪ್ ತನ್ನದಾಗಿಸಿಕೊಂಡಿತು. ತಂಡದ ರಾಜನಂದಿನಿ 'ಪಂದ್ಯಶ್ರೇಷ್ಠ ಪ್ರಶಸ್ತಿ' ಗಳಿಸಿದರು.
ಪ್ರಥಮ ಬಹುಮಾನ 25 ಸಾವಿರ ನಗದು ಮತ್ತು ಪದಕವನ್ನು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ವಿತರಿಸಿದರು. ಬಳಿಕ ಪ್ರಶಸ್ತಿ ಫಲಕ, ಆಕರ್ಷಕ ಟ್ರೋಫಿ ನೀಡಲಾಯಿತು. ದ್ವಿತೀಯ ಬಹುಮಾನ ಪಡೆದ ಗುಜರಾತ್ 15 ಸಾವಿರ ರೂ ನಗದು ಮತ್ತು ಪದಕ ಸ್ವೀಕರಿಸಿತು. ಕೇರಳ ಮೂರನೇ ಸ್ಥಾನ ಪಡೆದುಕೊಂಡಿತು. ಡಿಡಿಪಿಯು ಕೃಷ್ಣಪ್ಪ ಸೇರಿದಂತೆ ನಗರದ ಗಣ್ಯರು ಹಾಜರಿದ್ದರು.
ಇದನ್ನೂ ಓದಿ:'ಕೈ ಮುರಿದರೂ ಹಾಕಿ ಬಿಡಲಿಲ್ಲ': ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಯೆಂಡಾಲ ಸೌಂದರ್ಯ