ನಲ್ಗೊಂಡ, ತೆಲಂಗಾಣ: ನಲ್ಗೊಂಡ ಜಿಲ್ಲೆಯ ಹೃದಯಭಾಗದಲ್ಲಿರುವ ಮೂಡು ಗುಡಿಸೆಲಾ ತಾಂಡಾ ಎಂಬ ದೂರದ ಬುಡಕಟ್ಟು ಗ್ರಾಮವೊಂದು ಈಗ ನಾಡಿನ ಗಮನ ಸೆಳೆಯುತ್ತಿದೆ. ಸ್ವಾವಲಂಬನೆ ಮತ್ತು ಸಂಪ್ರದಾಯದ ಸಾರವನ್ನು ಮಿಳಿತವಾಗಿಸಿಕೊಂಡಿರುವ ಈ ಗ್ರಾಮ ಸದ್ಯ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ.
ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು ಎಂಬ ದೂರದೃಷ್ಟಿಯುಳ್ಳ ವ್ಯಕ್ತಿಯೊಬ್ಬರು ಸ್ಥಾಪಿಸಿದ್ದರು. ಅವರು ತಮ್ಮ ಪತ್ನಿ ಚಾಂದಿನಿಯೊಂದಿಗೆ ಗಾಂಧಿನಗರ ತಾಂಡಾವನ್ನು ತೊರೆದು ಅರಣ್ಯ ಪ್ರದೇಶಕ್ಕೆ ಬಂದು ಈ ತಾಂಡಾದಲ್ಲಿ ವಿಶಿಷ್ಟ ಸಮುದಾಯ ಜೀವನಕ್ಕೆ ಅಡಿಪಾಯ ಹಾಕಿದ್ದರು.
ಒಂದು ಗುಡಿಸಲಿನಿಂದ ಒಂದು ಹಳ್ಳಿಯಾಗಿ ಬೆಳೆದ ಪರಿ: 1955 ರಲ್ಲಿ ಚಂದ್ರು ಮತ್ತು ಚಾಂದಿನಿ ಕಾಡು ಮತ್ತು ಬೆಟ್ಟ ಗುಡ್ಡಗಳಿಂದ ಆವೃತವಾದ ಈ ಪ್ರಕೃತಿಯ ಮಡಿಲಲ್ಲಿ ಬಂದು ನೆಲೆಸಿದರು. ಮುಖ್ಯವಾಗಿ ಕೃಷಿಯನ್ನೇ ಅವಲಂಬಿಸಿದ್ದ ಅವರು ಮಳೆ ನೀರನ್ನು ಮಾತ್ರ ಅವಲಂಬಿಸಿ ಜೋಳ ಮತ್ತು ಸಜ್ಜೆಯನ್ನು ಬೆಳೆಯುತ್ತಿದ್ದರು. ರೊಟ್ಟಿ, ಮೆಣಸಿನಕಾಯಿ ಮತ್ತು ಉಪ್ಪಿನಕಾಯಿಯ ಸರಳ ಆಹಾರ ಸೇವಿಸುತ್ತಲೇ ಅವರು ಹಲವಾರು ವರ್ಷ ಇಲ್ಲಿ ಜೀವಿಸಿದರು.
ಚಂದ್ರು ಅವರ ದೃಢನಿಶ್ಚಯ ಮತ್ತು ಸ್ವಾವಲಂಬನೆಯ ದೃಷ್ಟಿಕೋನವು ಈಗ ಅಭಿವೃದ್ಧಿ ಹೊಂದುತ್ತಿರುವ ಸಮುದಾಯಕ್ಕೆ ಅಡಿಪಾಯವಾಗಿದೆ. ಈ ದಂಪತಿಗೆ ಪೂರ್ಯಾ, ದೂಡಾ ಮತ್ತು ಗಣಸ್ಯಾ ಎಂಬ ಮೂವರು ಗಂಡು ಮಕ್ಕಳಿದ್ದರು. ಇವರು ಸಹ ಅದೇ ಪ್ರದೇಶದಲ್ಲಿ ಕೃಷಿ ಕಾಯಕ ಮಾಡುತ್ತ ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸಿದರು. ಕಾಲಾನಂತರದಲ್ಲಿ, ಮೂರೂ ಗಂಡು ಮಕ್ಕಳು ಮದುವೆಯಾಗಿ ತಮ್ಮ ತಮ್ಮ ಮನೆಗಳನ್ನು ಮಾಡಿಕೊಂಡ ನಂತರ ಗ್ರಾಮವು ಮೂರು ಶಾಶ್ವತ ನಿವಾಸಗಳ ಸಮೂಹವಾಗಿ ಬೆಳೆಯಿತು. ಇದೇ ಕಾರಣದಿಂದ ಇದನ್ನು ಮೂರು ಗುಡಿಸಲುಗಳ ತಾಂಡಾ ಎಂದು ಕರೆಯಲಾಯಿತು.
ಕತ್ತಲೆಯಿಂದ ಬೆಳಕಿನೆಡೆಗೆ ಪಯಣ: ಈ ತಾಂಡಾದ ಬಗ್ಗೆ ಸಿಪಿಐ ನಾಯಕ ಗುಲಾಮ್ ರಸೂಲ್ ವಿಶೇಷವಾಗಿ ಗಮನ ಹರಿಸಿದ ನಂತರ ಮೂಡು ಗುಡಿಸೆಲಾ ತಾಂಡಾದ ಜೀವನವು ಪರಿವರ್ತನಾತ್ಮಕ ತಿರುವು ಪಡೆಯಿತು. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇರುವುದನ್ನು ಮನಗಂಡ ಅವರು, ಆಗಿನ ಸಂಸದ ಧರ್ಮಾಭಿಕ್ಷಾ ಅವರೊಂದಿಗೆ ಮಾತನಾಡಿ ಈ ಪ್ರದೇಶದಲ್ಲಿ ವಿದ್ಯುತ್ ಪರಿವರ್ತಕವನ್ನು ಸ್ಥಾಪಿಸಲು ಸಹಾಯ ಮಾಡಿದರು. ಪರಿವರ್ತಕವನ್ನು ಸ್ಥಾಪಿಸುವ ಸಮಯದಲ್ಲಿ, ತಾಂಡಾದ ಹೆಸರನ್ನು ಅಧಿಕೃತವಾಗಿ "ಮೂರು ಗುಡಿಸಲುಗಳ ತಾಂಡಾ" ಎಂದು ದಾಖಲಿಸಲಾಯಿತು. ಅದೇ ಹೆಸರು ಈಗಲೂ ಮುಂದುವರೆದುಕೊಂಡು ಬಂದಿದೆ.
ಕೃಷಿಯನ್ನೇ ಉಸಿರಾಗಿಸಿಕೊಂಡಿರುವ ಹಳ್ಳಿ: ಇಂದು, ಮೂಡು ಗುಡಿಸೆಲ ತಾಂಡಾವು ಚಂದ್ರು ಅವರ ವಂಶಸ್ಥರಾದ ಸುಮಾರು 20 ಕುಟುಂಬಗಳಿಗೆ ನೆಲೆಯಾಗಿದೆ. ಒಂದೇ ಕುಲದ ಸುಮಾರು 60 ಸದಸ್ಯರನ್ನು ಹೊಂದಿರುವ ಈ ಗ್ರಾಮವು ಕೃಷಿಯೊಂದಿಗೆ ಬಲವಾದ ಸಂಬಂಧ ಹೊಂದಿದೆ. ಆಧುನೀಕರಣದ ಹೊರತಾಗಿಯೂ, ಒಂದೇ ಒಂದು ಕುಟುಂಬವು ವಲಸೆ ಹೋಗಿಲ್ಲ. ಇದು ಅವರ ಭೂಮಿ ಮತ್ತು ಜೀವನಶೈಲಿಯೊಂದಿಗೆ ಅವರ ಆಳವಾದ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ.
ಶುದ್ಧ ಗಾಳಿ ಮತ್ತು ಜೋಳದ ರೊಟ್ಟಿಗಳ ಸರಳ ಆಹಾರ ಸೇವಿಸುವ ಗ್ರಾಮಸ್ಥರು, ತಮ್ಮ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ತಮ್ಮ ಸಾಂಪ್ರದಾಯಿಕ ಜೀವನ ವಿಧಾನವೇ ಕಾರಣವೆಂದು ಹೇಳುತ್ತಾರೆ. ವಿಶೇಷವೆಂದರೆ, ಚಂದ್ರು ಅವರ ಇಬ್ಬರು ಪುತ್ರರು ಈಗಲೂ ಆರೋಗ್ಯವಂತರಾಗಿದ್ದು, ಗ್ರಾಮದ ಶ್ರೀಮಂತ ಇತಿಹಾಸಕ್ಕೆ ಜೀವಂತ ಸಾಕ್ಷಿಗಳಾಗಿ ನಿಂತಿದ್ದಾರೆ.
ದೃಢತೆಗೆ ಒಂದು ಸಾಕ್ಷಿ ಈ ತಾಂಡಾ: ಮೂಡು ಗುಡಿಸೆಲ ತಾಂಡಾ ಕೇವಲ ಒಂದು ಹಳ್ಳಿಯಾಗಿರದೇ ಅದಕ್ಕೂ ಹೆಚ್ಚಿನ ವಿಶಿಷ್ಟ ಸಮುದಾಯವಾಗಿದೆ. ಇದು ಒಂದೇ ಗುಡಿಸಲನ್ನು ಅಭಿವೃದ್ಧಿ ಹೊಂದುತ್ತಿರುವ ವಸಾಹತುವನ್ನಾಗಿ ಪರಿವರ್ತಿಸಿದ ಕುಟುಂಬದ ದೃಢತೆ, ಏಕತೆ ಮತ್ತು ಶಾಶ್ವತ ಮನೋಭಾವಕ್ಕೆ ಸಾಕ್ಷಿಯಾಗಿದೆ.
"ಭೂಮಿ ಕೇವಲ ಜೀವನೋಪಾಯವಲ್ಲ, ಬದಲಿಗೆ ಅದು ನಮ್ಮ ಕುಟುಂಬದ ಪರಂಪರೆ ಎಂಬುದನ್ನು ನಮ್ಮ ತಂದೆ ನಮಗೆ ಕಲಿಸಿದರು. ಅದಕ್ಕಾಗಿಯೇ ನಾವು ಇಲ್ಲಿಯೇ ಉಳಿದು ಆ ಪರಂಪರೆಯನ್ನು ಪೋಷಿಸಿದ್ದೇವೆ. ಇಷ್ಟು ವರ್ಷಗಳ ನಂತರವೂ, ನಮ್ಮ ತಂದೆ ನಂಬಿದ್ದ ಮಣ್ಣಿನಿಂದ ಸಂಪರ್ಕ ಹೊಂದಿದ ಒಂದೇ ಕುಟುಂಬವಾಗಿ ನಾವು ವಾಸಿಸುತ್ತಿದ್ದೇವೆ. ಈ ಭೂಮಿ ನಮಗೆ ಎಲ್ಲವನ್ನೂ ನೀಡಿದೆ." ಎನ್ನುತ್ತಾರೆ ಚಂದ್ರು ಅವರ ಎರಡನೇ ಮಗ ದೂಡಾ.
"ತಂದೆ ದಣಿವರಿಯದೇ ಕೆಲಸ ಮಾಡುವುದನ್ನು ನೋಡುತ್ತಲೇ ನಾವು ಬೆಳೆದಿದ್ದೇವೆ. ಅವರ ಕನಸು ಈ ಗ್ರಾಮವನ್ನು ಜೀವಂತವಾಗಿರಿಸಿದೆ ಮತ್ತು ಅದನ್ನು ಮುಂದುವರಿಸಲು ನಾವು ಹೆಮ್ಮೆಪಡುತ್ತೇವೆ. ಒಟ್ಟಿಗೆ ಇರುವುದರಲ್ಲಿ ನಮ್ಮ ಶಕ್ತಿ ಅಡಗಿದೆ. ಮೂರು ಗುಡಿಸಲುಗಳು ಈಗ ಬೆಳೆದು ಹಳ್ಳಿಯಾಗಿದೆ ಎಂದರೆ ನಮ್ಮ ತಂದೆ ನಮ್ಮಲ್ಲಿ ತುಂಬಿದ ಏಕತೆ ಅಲುಗಾಡದೆ ಉಳಿದಿರುವುದೇ ಕಾರಣ" ಎಂದರು ಚಂದ್ರು ಅವರ ಕಿರಿಯ ಮಗ ಗಣಸ್ಯಾ.
ಇದನ್ನೂ ಓದಿ: ಚೆನ್ನೈನಲ್ಲಿ ಎನ್ಕೌಂಟರ್: ವಾಂಟೆಡ್ ಕ್ರಿಮಿನಲ್ 'ಬಾಂಬ್' ಸರವಣನ್ ಬಂಧನ - ENCOUNTER IN CHENNAI