ಚಾಮರಾಜನಗರ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಉತ್ಸವದ 4ನೇ ದಿನವಾದ ಗುರುವಾರ ಪಂಕ್ತಿಸೇವೆ ನಡೆಯಿತು. ದೇಗುಲ ಆವರಣ ಬಿಟ್ಟು ಖಾಸಗಿ ಜಮೀನುಗಳಲ್ಲಿ ಟೆಂಟ್ ಹಾಕಿಕೊಂಡು ಬಿಡಾರ ಹೂಡಿದ್ದ ಸಿದ್ದಪ್ಪಾಜಿಯ ಸಹಸ್ರಾರು ಭಕ್ತರು ಕುರಿ, ಕೋಳಿಯನ್ನು ಕೊಯ್ದು ಮಾಂಸದ ಅಡುಗೆ ಮಾಡಿ ನೈವೇದ್ಯ ಸಲ್ಲಿಸಿದರು. ಬಳಿಕ ಎಲ್ಲರೂ, ಪಂಕ್ತಿ ಸೇವೆಯಲ್ಲಿ ಭಾಗಿಯಾಗಿ ಸಹಭೋಜನ ಸವಿದರು.
ಚಿಕ್ಕಲ್ಲೂರು ಕ್ಷೇತ್ರದಲ್ಲಿ 5 ಹಗಲು 5 ರಾತ್ರಿ ಜಾತ್ರೆ ನಡೆಯಲಿದ್ದು, 4ನೇ ದಿನದಂದು ಪಂಕ್ತಿ ಸೇವೆ ನಡೆಸಲಾಗುತ್ತದೆ. ಅದರಂತೆ, ಸಹಸ್ರಾರು ಮಂದಿ ಭಕ್ತರು ದೇವರಿಗೆ ಅನ್ನ, ಮುದ್ದೆ, ಮಾಂಸದ ಭಕ್ಷ್ಯಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿ ಸಹಪಂಕ್ತಿ ಭೋಜನ ನಡೆಸಿದರು.
ಪ್ರಾಣಿ ಬಲಿ ಜಟಾಪಟಿ: ಪ್ರಾಣಿ ದಯಾ ಸಂಘಟನೆಯ ದಯಾನಂದ ಸ್ವಾಮೀಜಿ ಅವರು ಜಾತ್ರೆಯಲ್ಲಿ ಪ್ರಾಣಿ ಬಲಿ ಕೊಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದರು. ಆದರೆ, ಸಿದ್ದಪ್ಪಾಜಿಯ ಭಕ್ತರು ಕ್ಷೇತ್ರದಲ್ಲಿ ಬಲಿಪೀಠವೇ ಇಲ್ಲ. ಪ್ರಾಣಿ ಬಲಿ ಕೊಡುವುದಿಲ್ಲ. ಮಾಂಸಾಹಾರ ಸಂಸ್ಕೃತಿಯಾಗಿದ್ದು, ಅದನ್ನು ಎಡೆಯಿಟ್ಟು ಬಳಿಕ ಸಹಪಂಕ್ತಿ ಭೋಜನ ನಡೆಸುತ್ತೇವೆ ಎಂದಿದ್ದರು. ಜಿಲ್ಲಾಡಳಿತವೂ ಪ್ರಾಣಿ, ಪಕ್ಷಿ ಬಲಿ ಕೊಡದಂತೆ ಆದೇಶ ಹೊರಡಿಸಿ, ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿತ್ತು.
ಜಿಲ್ಲಾಡಳಿತದ ಕಟ್ಟುನಿಟ್ಟಿನ ಪ್ರಾಣಿಬಲಿ ನಿಷೇಧದ ನಡುವೆಯೂ ಹರಕೆ ಹೊತ್ತ ಭಕ್ತರು ತಮ್ಮ ನೆಂಟರಿಷ್ಟರಿಗೆ ಸಹಪಂಕ್ತಿ ಭೋಜನ (ಬಾಡೂಟ) ಹಾಕುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.
ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಮಂದಿ ಸಿದ್ದಪ್ಪಾಜಿ ಭಕ್ತರು ಭಾಗಿಯಾಗಿ ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಕಂಡಾಯಗಳಿಗೆ ಪೂಜೆ: ಜಾತ್ರೆ ಆರಂಭಕ್ಕೂ ಮುನ್ನ ಕುರಿ- ಮೇಕೆಗಳನ್ನು ಅಕ್ಕಪಕ್ಕದ ಜಮೀನುಗಳಲ್ಲಿ ಬಿಟ್ಟಿದ್ದರು. ದೇಗುಲದಿಂದ ತೀರ್ಥ ಕೊಂಡೊಯ್ದು ತಾವು ಹೂಡಿದ್ದ ಬಿಡಾರ, ಜಮೀನುಗಳಲ್ಲಿ ಪ್ರಾಣಿಗಳನ್ನು ಕೊಯ್ದು ಅಡುಗೆ ಮಾಡಿ ಪಂಕ್ತಿ ಸೇವೆ ಸಲ್ಲಿಸಿದರು. ಇನ್ನು ಕೆಲವರು, ಪ್ರಾಣಿ ಬಲಿ ನಿಷೇಧ ಹಿನ್ನೆಲೆ ರಾಗಿಮುದ್ದೆ, ಅವರೆಕಾಳು ಸಾರು, ಸಿಹಿ ಪೊಂಗಲ್ ಮಾಡಿ ಕಂಡಾಯಗಳಿಗೆ ನೈವೇದ್ಯ ಸಲ್ಲಿಸಿದರು.
ಮುತ್ತತ್ತಿರಾಯನ ಸೇವೆ ಬಳಿಕ ಸಂಪನ್ನ: 5 ದಿನಗಳ ಕಾಲ ನಡೆಯುವ ಜಾತ್ರೆಯು ಶುಕ್ರವಾರದಂದು ಮುತ್ತತ್ತಿರಾಯನ ಸೇವೆಯನ್ನು ಭಕ್ತರು ಸಲ್ಲಿಸಲಿದ್ದಾರೆ. ಚಂದ್ರಮಂಡಲದಿಂದ ಆರಂಭಗೊಳ್ಳುವ ಜಾತ್ರೆಯು ಮುತ್ತತ್ತಿರಾಯನ ಸೇವೆಯ ಮೂಲಕ ಸಂಪನ್ನಗೊಳ್ಳಲಿದೆ.
ಇದನ್ನೂ ಓದಿ: ಚಿಕ್ಕಲ್ಲೂರು ಜಾತ್ರೆ: ಪ್ರಾಣಿ ಬಲಿ, ಟ್ಯಾಟೂ ಹಾಕುವುದಕ್ಕೆ ನಿಷೇಧ
ಓದಿ: ಕೊಳ್ಳೇಗಾಲ: ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ವಿಧ್ಯುಕ್ತ ಚಾಲನೆ; ಉತ್ತರ ದಿಕ್ಕಿಗೆ ವಾಲಿದ ಚಂದ್ರಮಂಡಲ