ನವದೆಹಲಿ : ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಸವಲತ್ತುಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗ ರಚನೆ ಮತ್ತು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇಸ್ರೋಗೆ ಮೂರನೇ ಲಾಂಚ್ ಪ್ಯಾಡ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, "ಕೇಂದ್ರದ ಎಲ್ಲ ಸರ್ಕಾರಿ ನೌಕರರಿಗೆ ಅನುಕೂಲ ಒದಗಿಸುವ ಸಲುವಾಗಿ 8ನೇ ವೇತನ ಆಯೋಗವನ್ನು ರಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ, ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಸವಲತ್ತುಗಳನ್ನು ಪರಿಷ್ಕರಿಸಲು ಇಲ್ಲಿಯವರೆಗೂ 7 ವೇತನ ಆಯೋಗಗಳನ್ನು ರಚಿಸಲಾಗಿದೆ. ಈ ಆಯೋಗವು ಇನ್ನೂ ಅಸ್ತಿತ್ವದಲ್ಲಿದ್ದು, 8ನೇ ಆಯೋಗಕ್ಕೆ ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ. ಇದು ಅವರ ಕೆಲಸದ ಶಿಸ್ತು ತೋರಿಸುತ್ತದೆ. 7ನೇ ಕೇಂದ್ರ ವೇತನ ಆಯೋಗವನ್ನು 2016 ರಲ್ಲಿ ರಚಿಸಲಾಯಿತು. 2026 ರಲ್ಲಿ ಅದರ ಅವಧಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು.
2025 ಕ್ಕಿಂತ ಮುಂಚೆಯೇ 8 ನೇ ಕೇಂದ್ರ ವೇತನ ಆಯೋಗವನ್ನು ಸ್ಥಾಪಿಸುವುದರಿಂದ ಅದರ ಶಿಫಾರಸುಗಳನ್ನು ಪರಿಶೀಲಿಸಲು ಮತ್ತು ಅಂತಿಮಗೊಳಿಸಲು ಸಾಕಷ್ಟು ಸಮಯ ಸಿಗುತ್ತದೆ. ಈ ಪೂರ್ವಭಾವಿ ಕ್ರಮವು 7ನೇ ವೇತನ ಆಯೋಗದ ಅವಧಿ ಮುಗಿಯುವ ಮೊದಲು ಪ್ರಸ್ತಾವಿತ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ ಎಂದರು.
ಇಸ್ರೋಗೆ ಮೂರನೇ ಲಾಂಚ್ ಪ್ಯಾಡ್: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಕೇಂದ್ರದಲ್ಲಿ ಮೂರನೇ ಲಾಂಚ್ ಪ್ಯಾಡ್ (ಟಿಎಲ್‌ಪಿ) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅಶ್ವಿನ್ ವೈಷ್ಣವ್ ತಿಳಿಸಿದರು.
"ಮೂರನೇ ಉಡಾವಣಾ ಕೇಂದ್ರದ ಯೋಜನೆಯು ಇಸ್ರೋದ ಮುಂದಿನ ಯೋಜನೆಗಳಿಗೆ ಬಲ ನೀಡುತ್ತದೆ. ಈಗಿರುವ ಎರಡನೇ ಉಡಾವಣಾ ಪ್ಯಾಡ್‌ಗೆ ಬೆಂಬಲವಾಗಿ ಮೂರನೇ ಲಾಂಚ್ ಪ್ಯಾಡ್ 4 ವರ್ಷದಲ್ಲಿ ನಿರ್ಮಿಸಲು ಉದ್ದೇಶಿಸಿಸಲಾಗಿದೆ. ಇದಕ್ಕಾಗಿ 3,984 ಕೋಟಿ ರೂಪಾಯಿ ಖರ್ಚಾಗಲಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ 4ನೇ ಗ್ಯಾರಂಟಿ: ₹500 ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್, ಪಡಿತರ ಉಚಿತ