ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ನೂತನ ಒಂಬುಡ್ಸ್ಮನ್ ಮತ್ತು ನೈತಿಕ ಅಧಿಕಾರಿಯಾಗಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಬಿಸಿಸಿಐ ಈ ಬಗ್ಗೆ ತನ್ನ ವೆಬ್ಸೈಟ್ನಲ್ಲಿ ಅಧಿಕೃತವಾಗಿ ಪ್ರಕಟಣೆ ನೀಡಿದೆ.
ಅರುಣ್ ಮಿಶ್ರಾ ಜುಲೈ 7, 2014 ರಿಂದ ಸೆಪ್ಟೆಂಬರ್ 2, 2020 ರವರೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಅವರನ್ನು ಜೂನ್ 2, 2021 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ಸಿ) ಅಧ್ಯಕ್ಷರಾಗಿ ನೇಮಿಸಲಾಯಿತು ಮತ್ತು ಜೂನ್ 1, 2024 ರವರೆಗೆ ಅವರು ಈ ಹುದ್ದೆಯಲ್ಲಿದ್ದರು.
ಸೆಪ್ಟೆಂಬರ್ 3, 1955 ರಂದು ಗ್ವಾಲಿಯರ್ನಲ್ಲಿ ಜನಿಸಿದ ಮಿಶ್ರಾ 1978 ರಿಂದ 1999 ರವರೆಗೆ ವೃತ್ತಿಪರ ವಕೀಲರಾಗಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರು ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಪೀಠದಲ್ಲಿ ಸಾಂವಿಧಾನಿಕ, ಸಿವಿಲ್, ಕೈಗಾರಿಕಾ, ಕ್ರಿಮಿನಲ್ ಮತ್ತು ಸೇವಾ ವಿಷಯಗಳಲ್ಲಿ ಪರಿಣಿತ ವಕೀಲರಾಗಿ ಸೇವೆ ಸಲ್ಲಿಸಿದ್ದರು .
ಅವರು 1998 ರಿಂದ 1999 ರವರೆಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈ ಉನ್ನತ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಅಕ್ಟೋಬರ್ 25, 1999 ರಂದು ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಮಿಶ್ರಾ ನವೆಂಬರ್ 26, 2010 ರಂದು ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು ಮತ್ತು ಡಿಸೆಂಬರ್ 14, 2012 ರಂದು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವವರೆಗೂ ಈ ಹುದ್ದೆಯಲ್ಲಿದ್ದರು.
ದೆಹಲಿ ಮತ್ತು ಮದ್ರಾಸ್ ಹೈಕೋರ್ಟ್ಗಳ ಮಾಜಿ ಮುಖ್ಯ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಅವರು ಬಿಸಿಸಿಐನ ಮೊದಲ ಒಂಬುಡ್ಸ್ ಮನ್ ಆಗಿ ನೇಮಕಗೊಂಡಿದ್ದರು. ಹೊಸ ಸಂವಿಧಾನದ ಪ್ರಕಾರ ಸುಪ್ರೀಂ ಕೋರ್ಟ್ ತನ್ನ ಮಾಜಿ ನ್ಯಾಯಮೂರ್ತಿ ಡಿ.ಕೆ. ಜೈನ್ ಅವರನ್ನು 2019 ರ ಫೆಬ್ರವರಿಯಲ್ಲಿ ಹೊಸ ಬಿಸಿಸಿಐ ಒಂಬುಡ್ಸ್ ಮನ್ ಮತ್ತು ನೈತಿಕ ಅಧಿಕಾರಿಯಾಗಿ ನೇಮಿಸಿತು. ಅವರು 2021 ರವರೆಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ನ್ಯಾಯಮೂರ್ತಿ ಮಿಶ್ರಾ ಅವರ ನೇಮಕಕ್ಕೂ ಮೊದಲು ನ್ಯಾಯಮೂರ್ತಿ ವಿನೀತ್ ಸರನ್ ಅವರನ್ನು 2022 ರಲ್ಲಿ ಬಿಸಿಸಿಐ ಒಂಬುಡ್ಸ್ಮನ್ ಮತ್ತು ನೈತಿಕ ಅಧಿಕಾರಿಯಾಗಿ ನೇಮಿಸಲಾಗಿತ್ತು.
ಇದನ್ನೂ ಓದಿ : ಮದುರೈನಲ್ಲಿ ಅಲಂಗನಲ್ಲೂರ್ ಜಲ್ಲಿಕಟ್ಟು ಕ್ರೀಡಾಕೂಟ ಆರಂಭ: ಡಿಸಿಎಂ ಉದಯನಿಧಿ ಸ್ಟಾಲಿನ್ ಚಾಲನೆ - JALLIKATTU