ಮಂಗಳೂರು: ನಾಲ್ಕು ಕೆಜಿ ತೂಕ ಹೊಂದಿದ್ದ ನಾಲ್ಕು ತಿಂಗಳ ಹಸುಗೂಸಿಗೆ ಆಪರೇಷನ್ ಮಾಡದೇ, ಹೃದಯ ಸಮಸ್ಯೆ ಗುಣಪಡಿಸಿದ ಅಪರೂಪದ ಚಿಕಿತ್ಸೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಡೆದಿದೆ.
ಮಗುವು ಜನಿಸುವ ಮೊದಲು ಭ್ರೂಣಾವಸ್ಥೆಯಲ್ಲಿ ಅಪದಮನಿ ಮತ್ತು ಅಭಿದಮನಿ ತೆರೆದ ರೀತಿಯಲ್ಲಿ ಇರುತ್ತದೆ. ಆ ಬಳಿಕ ಅದು ಮುಚ್ಚುತ್ತದೆ. ಆದರೆ, ಈ ಮಗುವಿಗೆ ಜನಿಸಿದ ಬಳಿಕವು ದಮನಿಗಳು ತೆರೆದೇ ಇದ್ದವು. ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತಿತ್ತು.
ಕಡಿಮೆ ತೂಕದಿಂದಾಗಿ ಶಿಶುವನ್ನು ನಗರದ ಬೇರೊಂದು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಕೆಎಂಸಿ ಆಸ್ಪತ್ರೆಗೆ ತುರ್ತಾಗಿ ಕರೆ ತರಲಾಗಿದೆ. ಮಗು ತೀರಾ ಚಿಕ್ಕದಾದ ಕಾರಣ ಎದುರಿಸುತ್ತಿದ್ದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡುವುದು ಹಾಗೂ ಅನಸ್ತೇಶಿಯಾ ನೀಡುವುದು ಸವಾಲಿನದ್ದಾಗಿತ್ತು.
ಉಸಿರಾಟದ ಸೋಂಕಿನ ಕಾಯಿಲೆಯಿಂದ ಬಳಲುತ್ತಿರುವ ಹಸುಳೆಗೆ ಶಸ್ತ್ರಚಿಕಿತ್ಸೆ ನಡೆಸದೆ, ಪಿಡಿಎ (ಅಪದಮನಿ ಮತ್ತು ಅಭಿದಮನಿಯ ನಡುವಿನ ತೂತು) ಮುಚ್ಚುವುದು ಮಾತ್ರ ಏಕೈಕ ಪರಿಹಾರವಾಗಿತ್ತು. ಇಂತಹ ಕಠಿಣ ಚಿಕಿತ್ಸೆಯನ್ನು ಆಸ್ಪತ್ರೆಯ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ಸವಾಲಾಗಿ ಸ್ವೀಕರಿಸಿದ್ದಾರೆ.
ಬಳಿಕ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸದೆ, ಅರಿವಳಿಕೆ ಹಾಗೂ ಕ್ಯಾಥ್ಲ್ಯಾಬ್ ತಜ್ಞರ ಸಹಾಯದಿಂದ ಚಿಕಿತ್ಸೆ ನೀಡಿ ತೆರೆದುಕೊಂಡ ದಮನಿಗಳನ್ನು ಮುಚ್ಚಲಾಗಿದೆ. ಕಡಿಮೆ ತೂಕದಿಂದ ಬಳಲುತ್ತಿದ್ದ ಶಿಶುವಿಗೆ ತಜ್ಞರ ತಂಡವು ಭಾರೀ ಜಾಗರೂಕತೆ ಮೂಲಕ ಚಿಕಿತ್ಸೆ ನೀಡುವಲ್ಲಿ ಯಶಸ್ಸು ಕಂಡಿದೆ.
ಮಗುವಿಗೆ ಮರುಜನ್ಮ: ಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಮಾತನಾಡಿ, ಕಡಿಮೆ ತೂಕದ ಶಿಶುವಿಗೆ ಇಂತಹ ಸಮಸ್ಯೆ ಇರುವುದು ಅಪರೂಪ. ಇಂಥ ಚಿಕಿತ್ಸೆಯನ್ನು ಮಾಡಲು ಹೆಚ್ಚಿನ ಅನುಭವ ಬೇಕು. ವಿಶೇಷ ತಂಡದ ಬೆಂಬಲ ಬೇಕು. ಈ ಶಿಶುವಿಗೆ ಮರು ಜೀವನ ನೀಡುವಲ್ಲಿ ನಮ್ಮ ವೈದ್ಯರು ಯಶ ಕಂಡಿದ್ದಾರೆ ಎಂದರು.
ಮಗುವು ಜನಿಸುವ ಮೊದಲು ಭ್ರೂಣವಸ್ಥೆಯಲ್ಲಿ ಅಪದಮನಿ ಮತ್ತು ಅಭಿದಮನಿ ತೆರೆದ ರೀತಿಯಲ್ಲಿ ಇರುತ್ತವೆ. ಆ ಬಳಿಕ ಅವುಗಳು ಮುಚ್ಚಿಕೊಳ್ಳುತ್ತವೆ. ಆದರೆ, ಈ ಮಗುವಿಗೆ ಅವುಗಳು ತೆರೆದೇ ಇದ್ದವು. ಸುರಕ್ಷಿತ ಹಾಗೂ ಕಡಿಮೆ ನೋವಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಸಿಕೊಂಡು ಮಗುವನ್ನು ಗುಣಪಡಿಸಲಾಗಿದೆ ಎಂದರು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಬೆನ್ನಿನಿಂದ 2.5 ಇಂಚು ಉದ್ದದ ಚಾಕು ಹೊರಕ್ಕೆ; ಐಸಿಯುನಲ್ಲಿ ನಟ, ವೈದ್ಯರು ಹೇಳಿದ್ದಿಷ್ಟು